ಉಡುಪಿ ಗ್ಯಾಂಗ್‌ವಾರ್: ಸ್ವಯಂಪ್ರೇರಿತ ಸಹಿತ ಮತ್ತೆ ಮೂರು ಪ್ರಕರಣಗಳು ದಾಖಲು
ಉಡುಪಿ, ಮೇ 27: ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಕುಂಜಿಬೆಟ್ಟು ಎಂಬಲ್ಲಿ ಮೇ 18ರಂದು ನಸುಕಿನ ವೇಳೆ ನಡು ರಸ್ತೆಯಲ್ಲಿಯೇ ನಡೆದ ಗ್ಯಾಂಗ್‌ವಾರ್‌ಗೆ ಸಂಬಂಧಿಸಿ ಸ್ವಯಂ ಪ್ರೇರಿತ ಸೇರಿದಂತೆ ಮತ್ತೆ ಮೂರು ಪ್ರಕರಣಗಳು ಉಡುಪಿ ನಗರ ಠಾಣೆಯಲ್ಲಿ ದಾಖಲಾಗಿವೆ.
ಈ ಮೂಲಕ ಈ ಒಂದೇ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು ನಾಲ್ಕು ಪ್ರಕರಣಗಳು ದಾಖಲಾಗಿವೆ.
ಮೇ 26ರಂದು ನಗರ ಠಾಣೆಯ ಪೊಲೀಸ್ ನಿರೀಕ್ಷಕ ಶ್ರೀಧರ ವಸಂತ ಸತಾರೆ ಗ್ಯಾಂಗ್‌ವಾರ್‌ಗೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ತುಣುಕನ್ನು ಪರಿಶೀಲಿಸಿದ್ದು, ಅದರಲ್ಲಿ ಸುಮಾರು 5 ಕ್ಕಿಂತ ಹೆಚ್ಚು ಯುವಕರು ಕಾರು, ಬೈಕ್ ಮತ್ತು ಬುಲೆಟ್‌ನಲ್ಲಿ ಅಕ್ರಮ ಗುಂಪು ಸೇರಿ, ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಸಾರ್ವಜನಿಕವಾಗಿ ಭಯ ಹುಟ್ಟಿಸುವ ರೀತಿಯಲ್ಲಿ ಹೊಡೆದಾಡಿಕೊಂಡಿದ್ದಾರೆ. ಒಬ್ಬಾತನಿಗೆ ಕಾರು ಗುದ್ದಿಸಿ ರಸ್ತೆಗೆ ಬೀಳಿಸಿದ್ದು, ರಸ್ತೆಗೆ ಬಿದ್ದ ವ್ಯಕ್ತಿಯನ್ನು ಇಬ್ಬರು ಯುವಕರು ಮಾರಾಕಾಸ್ತ್ರಗಳಿಂದ ಹೊಡೆದಿರುವುದಾಗಿ ಪೊಲೀಸ್ ನಿರೀಕ್ಷಕ ಶ್ರೀಧರ ವಸಂತ ಸತಾರೆ ದೂರಿನಲ್ಲಿ ತಿಳಿಸಿದ್ದಾರೆ.
ದೂರು ಪ್ರತಿದೂರು: ಪ್ರಕರಣದ ಆರೋಪಿಗಳಾದ ಹೂಡೆಯ ಸಕ್ಲೈನ್(24) ಹಾಗೂ ಕಾಪುವಿನ ಶರೀಫ್(37) ಎಂಬವರು ಮೇ 26ರಂದು ನೀಡಿದ ದೂರು ಪ್ರತಿದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಕ್ಲೈನ್, ಆಶೀಕ್, ತೌಫಿಕ್, ಅರ್ಷದ್, ಇಸಾಕ್, ಶಾಹಿದ್ ಹಾಗೂ ರಾಕೀಬ್ ಮಣಿಪಾಲದಿಂದ ಕಾಪು ಕಡೆಗೆ ಹೋಗುತ್ತಿದ್ದ ಬೈಕ್, ಕಾರನ್ನು ಹಿಂದಿನಿಂದ ಕಾರಿನಲ್ಲಿ ಬಂದ ಶರೀಫ್, ಅಲ್ಫಾಝ್, ಮಜೀದ್ ಅಡ್ಡ ಹಾಕಿ ನಿಲ್ಲಿಸಿದರು. ಇದನ್ನು ಪ್ರಶ್ನಿಸಿ ದಾಗ ಶರೀಫ್ ಕೊಲ್ಲುವ ಉದ್ದೇಶದಿಂದ ತಲವಾರು ದಾಳಿ ನಡೆಸಿದ್ದು, ಇದರಿಂದ ಸಕ್ಲೈನ್ ಕಾಲಿಗೆ ಗಾಯವಾಗಿದೆ. ಬಳಿಕ ಅವರ ಸ್ನೇಹಿತರಿಗೂ ಆರೋಪಿಗಳು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆಂದು ದೂರಲಾಗಿದೆ.
ಪ್ರತಿದೂರಿನಲ್ಲಿ ಎರಡು ತಿಂಗಳ ಹಿಂದೆ ಜೈಲಿನಿಂದ ಹೊರ ಬಂದ ಆಶೀಕ್ ನನ್ನು ಮಂಗಳೂರು ಪೊಲೀಸರು ಹುಡುಕು ತ್ತಿದ್ದು, ಆತನ ಬಗ್ಗೆ ಮಾಹಿತಿಯನ್ನು ಪೊಲೀಸರಿಗೆ ಶರೀಫ್‌ನ ಸ್ನೇಹಿತ ನೀಡಿದ್ದ ಎಂಬ ವಿಚಾರದಲ್ಲಿ ಅವರೊಳಗೆ ಜಗಳ ನಡೆದಿತ್ತು. ಇದೇ ಕಾರಣಕ್ಕೆ ಶರೀಫ್, ಅಲ್ಫಾಝ್ ಮತ್ತು ಮಜೀದ್ ಕಾರಿನಲ್ಲಿ ಬರುತ್ತಿದ್ದಾಗ ಆಶೀಕ್, ಆಶೀಕ್, ಶಾಹಿದ್, ಸಿಯಾಜ್, ರಾಕೀಬ್ ಹಾಗೂ ಸಕ್ಲೈನ್ ತಲವಾರುಗಳಿಂದ ದಾಳಿ ನಡೆಸಿದ್ದಾರೆ. ಬಳಿಕ ಶರೀಫ್‌ಗೆ ಕಾರನ್ನು ಢಿಕ್ಕಿ ಹೊಡೆಸಿ ಕೆಳಕ್ಕೆ ಬಿಳಿಸಿ, ಸಕ್ಲೈನ್ ತಲವಾರಿನಿಂದ ಹೊಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಬಾರಕೂರಿನ ವ್ಯಕ್ತಿಯೊಬ್ಬರ ಕಾರನ್ನು ಇಸಾಕ್ ಮತ್ತು ಇತರರು ಜಖಂ ಗೊಳಿಸಿ, ಕಾರಿನಲ್ಲಿ ಅಕ್ರಮವಾಗಿ ತಲವಾರ ಇರಿಸಿ ಕಳ್ಳತನ ಮಾಡಲು ಪ್ರಯತ್ನಿಸಿರುವುದಾಗಿ ಮೇ 20ರಂದು ಉಡುಪಿ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿತ್ತು.
ಆರೋಪಿಗಳಿಗೆ ನ್ಯಾಯಾಂಗ ಬಂಧನ
ಗ್ಯಾಂಗ್‌ವಾರ್ ಪ್ರಕರಣದಲ್ಲಿ ಬಂಧಿತರಾಗಿರುವ ಎಲ್ಲ ಆರು ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಶರೀಫ್, ಮಜೀದ್ ಹಾಗೂ ಅಲ್ಫಾಝ್ ಎಂಬವರನ್ನು ಮೇ 27ರಂದು, ಸಕ್ಲೈನ್‌ನನ್ನು ಮೇ 26ರಂದು ಮತ್ತು ಈ ಹಿಂದೆ ಬಂಧಿತರಾದ ಆಶಿಕ್ ಮತ್ತು ರಾಕೀಬ್‌ನನ್ನು ಪೊಲೀಸರು ಮೇ 24ರಂದು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು ಎಂದು ಮೂಲಗಳು ತಿಳಿಸಿವೆ.