ಉಡುಪಿ ಗ್ಯಾಂಗ್ ವಾರ್ ಕುರಿತ ಶಾಸಕರ ರಾಜಕೀಯ ಪ್ರೇರಿತ ಹೇಳಿಕೆ ಖಂಡನೆ- ಶರ್ಪುದ್ದೀನ್ ಶೇಖ್
ಇತ್ತೀಚೆಗೆ ಉಡುಪಿಯಲ್ಲಿ ನಡೆದಂತಹ ಗ್ಯಾಂಗ್ ವಾರ್ ಘಟನೆ ಖಂಡನೀಯ. ಕೃತ್ಯ ನಡೆಸಿದ ಗ್ಯಾಂಗ್ ರೌಡಿಗಳನ್ನು ಅತೀ ಶೀಘ್ರದಲ್ಲಿ ಬಂಧಿಸಿದ ಪೋಲೀಸರ ಕಾರ್ಯ ಶ್ಲಾಘನೀಯವಾದದ್ದು, ಅವರಿಗೆ ಕಠಿಣ ಶಿಕ್ಷೆಯನ್ನು ವಿಧಿಸಲೇಬೇಕು ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶರ್ಪುದ್ದೀನ್ ಶೇಖ್ ಆಗ್ರಹಿಸಿದ್ದಾರೆ.
ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು. ಆದರೆ ಈ ವಿಚಾರದಲ್ಲಿ, ಉಡುಪಿ ಶಾಸಕರು ಮತ್ತು ಕಾರ್ಕಳ ಶಾಸಕರು ಕೊಟ್ಟಂತಹ ಹೇಳಿಕೆ ರಾಜಕೀಯ ಪ್ರೇರಿತವಾದದ್ದು. ಕಳೆದ ವರ್ಷ ನೇಜಾರಿನಲ್ಲಿ ಹಾಡುಹಗಲಲ್ಲಿ ನಡೆದ 4 ಜನರ ಬರ್ಬರ ಹತ್ಯೆಯ ಆರೋಪಿಯ ವಿರುದ್ದ ಆಗಲಿ, ನಿಮ್ಮದೇ ಪಕ್ಷದ ಬೆಳ್ತಂಗಡಿ ಶಾಸಕ ಪೂಂಜಾ ಪೋಲಿಸ್ ಠಾಣೆಗೆ ನುಗ್ಗಿ ಪೋಲಿಸರಿಗೆ ಅವಾಚ್ಯ ಶಬ್ದಗಳಿಂದ ಬೆದರಿಕೆ ಹಾಕಿದಾಗಲಿ, ನಿಮ್ಮದೇ ಸರ್ಕಾರ ಇದ್ದಾಗ ,ಸುರತ್ಕಲ್ ನಲ್ಲಿ ನಡೆದ ಫಾಝಿಲ್ ಹತ್ಯೆಯ ಸಮಯದಲ್ಲಿ, ಕೃಷ್ಣಾಪುರದಲ್ಲಿ ನಡೆದ ಘಟನೆಯ ಸಂದರ್ಭದಲ್ಲಿ ಅಥವಾ ಯಾವುದೇ ವಿಚಾರದಲ್ಲಿ ಅನೈತಿಕ ಪೋಲಿಸ್ ಗಿರಿ ಮಾಡುವ ಇಂತವರ ವಿರುದ್ದ ಇವರ ಸಾಮಾಜಿಕ ಕಳಕಳಿ ಬಂದಿದ್ದರೆ ಮೆಚ್ಚಬಹುದಿತ್ತು. ಆ ಸಂಧರ್ಭನಿಮ್ಮ ಬಾಯಿಯಿಂದ ಯಾವುದೇ ತರಹದ ಹೇಳಿಕೆಗಳು ಯಾಕೆ ಬರಲಿಲ್ಲ ?
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೂ ಇಂತಹ ಹಲವಾರು ಘಟನೆಗಳು ನಡೆದಿದೆ. ಎಲ್ಲ ಸಮಯದಲ್ಲೂ ಇಂತಹ ಕೃತ್ಯಗಳನ್ನು ನಾವು ಖಂಡಿಸಿದ್ದೇವೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.