ಉಡುಪಿ: ಸಿನಿಮೀಯ ಮಾದರಿಯ ಗ್ಯಾಂಗ್ ವಾರ್- ವಿಡಿಯೋ ವೈರಲ್, ಇಬ್ಬರ ಬಂಧನ
ಉಡುಪಿ, ಮೇ25 (ಉಡುಪಿ ಟೈಮ್ಸ್ ವರದಿ) ಎರಡು ತಂಡಗಳ ನಡುವೆ ಗ್ಯಾಂಗ್ ವಾರ್ ನಡೆದ ಘಟನೆ ಉಡುಪಿಯ ಕುಂಜಿಬೆಟ್ಟುವಿನಲ್ಲಿ ಮೇ. 17 ತಡರಾತ್ರಿ ನಡೆದಿದೆ.
ಘಟನೆಯ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದಂತೆ ಆರೋಪಿಗಳಾದ ಕಾಪುವಿನ ಗರುಡ ಗ್ಯಾಂಗ್‌ನ ಆಶಿಕ್ ಮತ್ತು ಹೂಡೆಯ ರಾಕಿಬ್‌ನನ್ನು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ: ಮೇ. 17 ರ ತಡರಾತ್ರಿ 1ಗಂಟೆಗೆ ಎರಡು ಕಾರಿನಲ್ಲಿದ್ದ ಏಳು ಯುವಕರಿದ್ದ ತಂಡವು ಸಿನಿಮಾದ ಚಿತ್ರೀಕರಣ ರೀತಿಯಲ್ಲಿ ಕಾರನ್ನು ಒಂದಕ್ಕೊಂದು ಡಿಕ್ಕಿ ಹೊಡೆಸಿಕೊಂಡು ಬಳಿಕ ತಲವಾರು ಝಳಪಳಿಸಿ ಕಾಳಗಕ್ಕೆ ಇಳಿದಿದ್ದಾರೆ. ಇದರಿಂದ ಶರೀಫ್ ಕಾಪುವಿಗೆ ತೀವ್ರವಾಗಿ ಗಾಯವಾಗಿತ್ತು. ಇದೇ ತಂಡವು ಇಂದ್ರಾಳಿ ಪೆಟ್ರೋಲ್ ಪಂಪ್ ಎದುರು ರಸ್ತೆಯಲ್ಲಿ ಮತ್ತೆ ಹೊಡದಾಡಿಕೊಂಡಿದೆ ಎನ್ನಲಾಗಿದೆ.
ಘಟನೆಯಲ್ಲಿ ಕಾಪುವಿನ ಆಶಿಕ್, ಹೊಡೆಯ ರಾಕಿಬ್‌ನನ್ನು ಬಂಧಿಸಿಲಾಗಿದೆ. ಉಳಿದ ಆರೋಪಿಗಳಾದ ಮಂಗಳೂರಿನ ಇಸಾಕ್, ಹೂಡೆಯ ಸಕ್ಲೇನ್ ಇನ್ನೊಂದು ತಂಡದ ಕೋಟಾದ ಮಜೀದ್, ಕಾಪುವಿನ ಆಲ್ಫಾಝ್, ಶರೀಫ್ ಅವರ ಬಂಧನಕ್ಕೆ ನಗರ ಪೊಲೀಸರು ಬಲೆ ಬೀಸಿದ್ದಾರೆ.
ತಂಡಗಳ ತಲಾವಾರು ಕಾಳಗ ನಡೆಯುತ್ತಿದ್ದ ಸಂದರ್ಭದಲ್ಲಿ ಇದೇ ರಸ್ತೆಯಲ್ಲಿ ದಂಪತಿಗಳು ಹೋಗುತ್ತಿದ್ದ ಕಾರಿಗೆ ಅವರ ಕಾರು ಡಿಕ್ಕಿ ಹೊಡೆದಿದೆ. ಇವರ ಕಾಳಗ ನೋಡಿ ಬೆಚ್ಚಿಬಿದ್ದ ಅವರು ಹೆದರಿ ಹೋಗಿದ್ದಾರೆ. ಬಳಿಕ ಗಾಯಗೊಂಡ ಮಹಿಳೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಬೆಚ್ಚಿಬಿದ್ದ ಜನತೆ: ವಿಡಿಯೋ ವೈರಲ್ ಆಗುತ್ತಿದ್ದಂತೆ ಉಡುಪಿ, ಮಣಿಪಾಲದ ಜನತೆ ಭಯಭೀತಗೊಂಡಿದ್ದು, ಪೊಲೀಸರ ರಾತ್ರಿ ಗಸ್ತು ಎನ್ನುವುದು ಇದೇ ಎಂದು ಪ್ರಶ್ನಿಸಲು ಪ್ರಾರಂಭಸಿದ್ದಾರೆ. ನಗರದ ಮುಖ್ಯ ರಸ್ತೆಯಲ್ಲಿ ಇಂತಹ ಗ್ಯಾಂಗ್ ವಾರ್ ನಡೆದರೂ ವಾರ ಕಳೆದರೂ ತಮಗೂ ಇದಕ್ಕೂ ಸಂಬಂಧ ಇಲ್ಲದಂತೆ ಇದ್ದಾರೆಯೇ ಎಂದು ಜನತೆ ಪ್ರಶ್ನಿಸುತ್ತಿದ್ದಾರೆ.
ಇದೇ ತಂಡವೂ ಈ ಮೊದಲು ಮಣಿಪಾಲದಲ್ಲಿ ಹೊಡೆದಾಟ ನಡೆಸಿದ್ದು, ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ಜಿಲ್ಲೆಯಲ್ಲಿ ಕಾನೂನು ಕೈಗೆತ್ತಿಕೊಳ್ಳು ಹಲವು ಪ್ರಕರಣಗಳು ದಿನ ನಿತ್ಯ ಎಂಬಂತೆ ನಡೆಯುತ್ತಿದ್ದರೂ ಪೊಲೀಸರಿಗೂ ತಮಗೂ ಸಂಬಂಧ ಇಲ್ಲದಂತೆ ವರ್ತಿಸುತ್ತಿದ್ದಾರೆ. ಮಣಿಪಾಲದ ಹಲವು ಬಾರ್‌ಗಳಲ್ಲಿ ಗಾಂಜಾ, ಡ್ರಗ್ಸ್‌ನಂತಹ ಅಮಲು ಪದಾರ್ಥಗಳ ದಂಧೆ ಕೈಮೀರಿ ಹೋಗುತ್ತಿದ್ದರೂ ಇಲಾಖೆ ಕೈಕಟ್ಟಿ ಕುಳಿತಿದೆ ಎಂದು ಜನರು ಆರೋಪಿಸುತ್ತಿದ್ದಾರೆ. ಇನ್ನಾದರೂ ಪೊಲೀಸ್ ಇಲಾಖೆ ಕಾನೂನು ಕೈಗೆತ್ತಿಕೊಳ್ಳುವವರ ಹೆಡೆಮುರಿಕಟ್ಟಿ ಹಾಕುತ್ತಾ ಕಾದುನೋಡಬೇಕು.