ರಾಜಸ್ಥಾನ: ಬಿಸಿಗಾಳಿಯ ಹೊಡೆತಕ್ಕೆ ಒಂಬತ್ತು ಮಂದಿ ಬಲಿ
ಜೈಪುರ: ರಾಜಸ್ಥಾನದಲ್ಲಿ ಕಳೆದ 10 ದಿನಗಳಿಂದ ತೀವ್ರ ಬಿಸಿಗಾಳಿಯ ಹೊಡೆತಕ್ಕೆ ಜನ ಕಂಗಾಲಾಗಿದ್ದಾರೆ. ಗರಿಷ್ಠ ತಾಪಮಾನ 49 ಡಿಗ್ರಿ ಸೆಲ್ಷಿಯಸ್ ತಲುಪಿದ್ದು, ಬಲೋತ್ರಾ ಹಾಗೂ ಜಾಲೋರ್ ಜಿಲ್ಲೆಗಳಲ್ಲಿ ತಲಾ ನಾಲ್ಕು ಮಂದಿ ಹಾಗೂ ಜೈಸಲ್ಮೇರ್ನಲ್ಲಿ ಒಬ್ಬರು ಸೇರಿದಂತೆ ಒಂಬತ್ತು ಮಂದಿಯ ಜೀವವನ್ನು ಬಲಿಪಡೆದಿದೆ.
ಕಳೆದ ವರ್ಷ ಬಲೋತ್ರದಿಂದ ಪ್ರತ್ಯೇಕಗೊಂಡ ಬರ್ಮೆರ್ನಲ್ಲಿ 48.8 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದೆ. ಜಾಲೋರ್ನಲ್ಲಿ ಗರಿಷ್ಠ ಉಷ್ಣಾಂಶ 47.4 ಡಿಗ್ರಿ ಸೆಲ್ಷಿಯಸ್ ಇದೆ. ಪಶ್ಚಿಮ ರಾಜಸ್ಥಾನದ ಹಲವು ಪ್ರದೇಶಗಳಲ್ಲಿ ತಾಪಮಾನ 49 ಡಿಗ್ರಿ ಸೆಲ್ಷಿಯಸ್ನಷ್ಟು ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸದ್ಯೋಭವಿಷ್ಯದಲ್ಲಿ ಜನ ಪಶ್ಚಿಮ ಪ್ರಕ್ಷುಬ್ಧತೆಯಿಂದ ನಿರಾಳವಾಗುವ ಸೂಚನೆ ಇಲ್ಲ” ಎಂದು ಜೈಪುರ ಹವಾಮಾನ ಇಲಾಖೆ ನಿರ್ದೇಶಕ ರಾಧೇಶ್ಯಾಮ್ ಶರ್ಮಾ ಹೇಳಿದ್ದಾರೆ.
ಜಾಲೋರ್ನ ಸಫದಾ ಗ್ರಾಮದಲ್ಲಿ ಬಿಸಿಗಾಳಿಯ ಹೊಡೆತಕ್ಕೆ ಕಮಲಾದೇವಿ (42) ಎಂಬುವವರು ಜೀವ ಕಳೆದುಕೊಂಡಿದ್ದಾರೆ. ಅಹೋರ್ ಉಪವಲಯದ ಸಂಗದಿ ಗ್ರಾಮದಲ್ಲಿ ಪೊಪಟ್ಲಾಲ್ (30) ಉಷ್ಣಗಾಳಿಯ ಹೊಡೆತಕ್ಕೆ ಅಸು ನೀಗಿದ್ದರೆ, ಜಾಲೋರ್ ರೈಲು ನಿಲ್ದಾಣದ ಬಳಿ ಇಬ್ಬರು ವಯೋವೃದ್ಧರು ಮೃತಪಟ್ಟಿದ್ದಾರೆ. ಬಲೋತ್ರಾದ ಪಚಪಾದ್ರ ರಿಫೈನರಿಯಲ್ಲಿ ಸಿನೇಂದ್ರ ಸಿಂಗ್ ಎಂಬುವವರು ತೀವ್ರ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದರು. ಪಶ್ಚಿಮ ಬಂಗಾಳದ ಕಾರ್ಮಿಕರೊಬ್ಬರು ಚಿಕಿತ್ಸೆ ವೇಳೆ ಮೃತಪಟ್ಟಿದ್ದು, ತಿಲ್ವಾರಾ ಯುವಕ ಹೀರ್ ಸಿಂಗ್, ಬಲೋತ್ರಾ ರೈಲು ನಿಲ್ದಾಣದ ಹೊರಗೆ ಮೃತಪಟ್ಟಿದ್ದಾರೆ. 60 ವರ್ಷ ವಯಸ್ಸಿನ ವ್ಯಕ್ತಿ ಬೈತು ಎಂಬಲ್ಲಿ ತಮ್ಮ ಹೊಲದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಜೈಸಲ್ಮೇರ್ನಲ್ಲಿ ಬಾಬುರಾಮ್ ಮೇಘ್ವಾಲ್ನ ದೇವ ಎಂಬ ಗಾಯಕ ಭಜನೆ ಮಾಡುವ ವೇಳೆಯೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.