ಶಾಸಕ ಹರೀಶ್ ಪೂಂಜ ಬಂಧಿಸಿದರೆ ಮುಂದಿನ ಬೆಳವಣಿಗೆಗೆ ಸರ್ಕಾರವೇ ಹೊಣೆ: ವಿಜಯೇಂದ್ರ ಎಚ್ಚರಿಕೆ
ಬೆಂಗಳೂರು: ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ವಿರುದ್ಧ ಎಫ್ಐಆರ್ ದಾಖಲಿಸಿರುವುದು ಖಂಡನೀಯ ಎಂದಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಚುನಾವಣಾ ನೀತಿಸಂಹಿತೆ ನೆಪವೊಡ್ಡಿ ಇದರ ಆಧಾರದಲ್ಲಿ ಶಾಸಕರನ್ನು ಬಂಧಿಸಿದರೆ ಪಕ್ಷ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಮುಂದಿನ ಬೆಳವಣಿಗೆಗೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಪ್ರಕರಣ ಕುರಿತು ಮಾಹಿತಿ ಪಡೆದಿದ್ದು, ವಿಷಯವನ್ನು ಮರೆಮಾಚುವ ಕೆಲಸವನ್ನು ಅಲ್ಲಿನ ಪೊಲೀಸರು ಮಾಡುತ್ತಿದ್ದಾರೆ. ಅಕ್ರಮ ಕ್ವಾರಿ ಚಟುವಟಿಕೆಯಲ್ಲಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶಶಿಧರ್ ಎಂಬಾತನ ಹೆಸರನ್ನು ಎಫ್ ಐಆರ್ ನಲ್ಲಿ ಸೇರಿಸುವ ಮೂಲಕ ಪೊಲೀಸರು ಪಿತೂರಿ ನಡೆಸಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಶಾಸಕ ಹರೀಶ್ ಪೂಂಜ ಅವರನ್ನು ಬಂಧಿಸುವ ಪ್ರಯತ್ನ ನಡೆದಿದೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಕಾನೂನು ಸುವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ನಮ್ಮ ಕಾರ್ಯಕರ್ತರನ್ನು ಕುಗ್ಗಿಸಲು ಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು.
ಶಾಸಕ ಹರೀಶ್ ಪೂಂಜ ನಿವಾಸಕ್ಕೆ ಪೊಲೀಸರ ದೌಡು, ಕಾರ್ಯಕರ್ತರ ಜಮಾವಣೆ
ಬೆಳ್ತಂಗಡಿ: ಪೊಲೀಸ್ ರಾಣೆಗೆ ನುಗ್ಗಿ ದಾಂದಲೆ ನಿಂದನೆ ಮಾಡಿದ ಪ್ರಕರಣ ಹಾಗೂ ಅನುಮತಿ ಇಲ್ಲದೆ ಬಿಜೆಪಿಯಿಂದ ಪ್ರತಿಭಟನಾ ಸಭೆ ನಡೆಸಿದ ಬಗ್ಗೆ ಬೆಳ್ತಂಗಡಿ ಶಾಸಕ ಹರೀಶ್ ವಿರುದ್ಧ ಈಗ ಎರಡು ಪ್ರಕರಣಗಳು ದಾಖಲಾಗಿದೆ.
ಸುಬ್ಬಾಪುರಮಠ ಮತ್ತು ಪಿಎಸ್‌ಐ ಚಂದ್ರಶೇಖರ್ ತಂಡ ಪೂಂಜ ಮನೆಗೆ ಅಗಮಿಸಿದ್ದಾರೆ. ಪಕ್ಷದ ಕಾರ್ಯಕರ್ತರು ಮನೆಯ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪೂಂಜಾ ನಿವಾಸವು ಪೊಲೀಸರು ಮತ್ತು ಪಕ್ಷದ ಕಾರ್ಯಕರ್ತರ ನಡುವಿನ ನಾಟಕೀಯ ನಾಟಕಕ್ಕೆ ಸಾಕ್ಷಿಯಾಗಿತ್ತು.ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಬ್ರಿಜೇಶ್ ಚೌಟ ಪೂಂಜಾ ನಿವಾಸಕ್ಕೆ ದೌಡಾಯಿಸಿದ್ದಾರೆ.
ಶಾಸಕ ಹರೀಶ್ ಪೂಂಜರನ್ನು ಬಂಧಿಸಿದರೆ ದ.ಕ. ಜಿಲ್ಲೆ ಬಂದ್ ಮಾಡಲಾಗುವುದು: ನಳಿನ್ ಕುಮಾರ್ ಕಟೀಲ್
ಬೆಳ್ತಂಗಡಿ: ಶಾಸಕ ಹರೀಶ್ ಪೂಂಜ ಅವರನ್ನು ಕಾನೂನು ಮೀರಿ ಬಂಧಿಸಿದರೆ ನಾಳೆ ದ.ಕ. ಜಿಲ್ಲೆ ಬಂದ್ ಮಾಡಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಹರೀಶ್ ಪೂಂಜ ಅವರ ಮನೆಯಲ್ಲಿ ಮಾತನಾಡಿದ ಸಂಸದರು ನ್ಯಾಯ ಕೇಳಿದ ಶಾಸಕರ ಮೇಲೆ ಕಾಂಗ್ರೆಸ್ ಸರಕಾರದ ಒತ್ತಡದಿಂದಾಗಿ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಯಾವುದೇ ಕಾರಣಕ್ಕೂ ಶಾಸಕರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದ ಸಂಸದರು, ಶಾಸಕರನ್ನು ಬಂಧಿಸುವ ದುಸ್ಸಾಹಸಕ್ಕೆ ಪೊಲೀಸರು ಕೈಹಾಕಬಾರದು ಎಂದು ಎಚ್ಚರಿಕೆ ನೀಡಿದರು.