ಕೊಂಕಣ ರೈಲ್ವೆ: ಟಿಕೆಟ್ ರಹಿತ ಪ್ರಯಾಣ ಒಂದೇ ತಿಂಗಳಲ್ಲಿ 2.69 ಕೋಟಿ ರೂ. ದಂಡ ವಸೂಲಿ
ಉಡುಪಿ, ಮೇ 21: ಟಿಕೆಟ್ ರಹಿತ ಪ್ರಯಾಣಿಕರ ಪತ್ತೆಗೆ ಕೊಂಕಣ ರೈಲು ಮಾರ್ಗದಲ್ಲಿ ವಿಶೇಷ ಅಭಿಯಾನವನ್ನು ಕೈಗೊಂಡಿರುವ ಕೊಂಕಣ ರೈಲ್ವೆ ಕಳೆದ ಎಪ್ರಿಲ್ ತಿಂಗಳಿನಲ್ಲಿ 2,69,85,256ರೂ.ಗಳನ್ನು ದಂಡ ರೂಪದಲ್ಲಿ ಸಂಗ್ರಹಿಸಿದೆ.
ಎಪ್ರಿಲ್ ತಿಂಗಳೊಂದರಲ್ಲೇ ಕೊಂಕಣ ರೈಲ್ವೆ ಮಾರ್ಗದಲ್ಲಿ ಒಟ್ಟು 15,129 ಮಂದಿ ಟಿಕೆಟ್ ರಹಿತ ಹಾಗೂ ಅನಧಿಕೃತವಾಗಿ ಸಂಚರಿಸುವವರನ್ನು ಪತ್ತೆ ಹಚ್ಚಿರುವ ಸಿಬ್ಬಂದಿ ಅವರಿಂದ 2.69 ಕೋಟಿ ರೂ. ಗಳನ್ನು ದಂಡ ರೂಪದಲ್ಲಿ ಸಂಗ್ರಹಿಸಿದ್ದಾರೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.
ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ರೈಲುಗಳಲ್ಲಿ ಒಂದು ತಿಂಗಳಲ್ಲಿ ಟಿಕೆಟ್ ರಹಿತ ಪ್ರಯಾಣಿಕರಿಂದ ಸಂಗ್ರಹಿಸಿದ ಅತ್ಯಧಿಕ ಮೊತ್ತದ ದಂಡ ಇದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೊಂಕಣ ರೈಲ್ವೆ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಅಧಿಕೃತವಾದ ಟಿಕೆಟ್ ಖರೀದಿಸಿ ಪ್ರಯಾಣಿಸುವಂತೆ ವಿನಂತಿಸಿರುವ ರೈಲ್ವೆ ಅಧಿಕಾರಿಗಳು ಈ ಮೂಲಕ ಕೆಆರ್‌ಸಿಎಲ್‌ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಆಗುವ ಯಾವುದೇ ರೀತಿಯ ತೊಂದರೆಯನ್ನು ತಪ್ಪಿಸುವಂತೆ ವಿನಂತಿಸಿದೆ. ಇನ್ನು ಮುಂದೆಯೂ ಕೊಂಕಣ ರೈಲ್ವೆಯ ಎಲ್ಲಾ ಮಾರ್ಗಗಳಲ್ಲೂ ಟಿಕೆಟ್ ಚಕ್ಕಿಂಗ್‌ನ್ನು ಇನ್ನಷ್ಟು ತೀವ್ರವಾಗಿ ನಡೆಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.