ಎಸೆಸೆಲ್ಸಿ ಪರೀಕ್ಷೆ: 2-3ಕ್ಕೆ ಕೃಪಾಂಕ ಇಲ್ಲ- ಸಚಿವ ಮಧು ಬಂಗಾರಪ್ಪ
ಉಡುಪಿ: ಈ ವರ್ಷ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯನ್ನು ಕಟ್ಟುನಿಟ್ಟಾಗಿ ನಡೆಸಿದ್ದರಿಂದ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಬೇಕಾಯಿತು. ಇದು ಒಂದು ಬಾರಿ ಮಾತ್ರ. ಮುಂದಿನ ಶೈಕ್ಷಣಿಕ ವರ್ಷ ಗಳಲ್ಲಿ ಈ ರೀತಿ ಕೃಪಾಂಕ ನೀಡುವುದಿಲ್ಲ. ಅಲ್ಲದೆ ಈ ಬಾರಿಯೂ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆ-2 ಮತ್ತು ವಾರ್ಷಿಕ ಪರೀಕ್ಷೆ-3ರಲ್ಲೂ ಕೃಪಾಂಕ ನೀಡಲಾಗುವುದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಈ ವರ್ಷ ಪರೀಕ್ಷಾ ಪಾವಿತ್ರ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಟ್ಟುನಿಟ್ಟಾದ ವ್ಯವಸ್ಥೆಯಡಿ ಪರೀಕ್ಷೆ ನಡೆಸಿ ದ್ದೇವೆ. ಬಳಿಕ ವಿದ್ಯಾರ್ಥಿಗಳ ಶೈಕ್ಷ ಣಿಕ ಅನುಕೂಲಕ್ಕಾಗಿ ಶೇ. 20ರಷ್ಟು ಕೃಪಾಂಕ ನೀಡಿದ್ದೇವೆ.
ಪರೀಕ್ಷೆ 2ಕ್ಕೆ ಸುಮಾರು 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇದನ್ನೂ ಕಟ್ಟುನಿಟ್ಟಾದ ವ್ಯವಸ್ಥೆಯಲ್ಲೇ ನಡೆಸಲಿದ್ದೇವೆ ಎಂದು ಉಡುಪಿಯ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.
3 ಸಾವಿರ ಕೆಪಿಎಸ್ ತೆರೆಯುವೆವು
ರಾಜ್ಯದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್)ಗಳಿಗೆ ಉತ್ತಮ ಬೇಡಿಕೆ ಇದೆ. ಹೀಗಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಸಿಎಸ್‌ಆರ್ ನಿಧಿ ಬಳಸಿ ಹೆಚ್ಚೆಚ್ಚು ಕೆಪಿಎಸ್ ತೆರೆಯಲು ಯೋಜನೆ ಹಾಕಿಕೊಂಡಿದ್ದೇವೆ. ಸ್ಥಳೀಯ ಸಂಘ ಸಂಸ್ಥೆಗಳು, ಕಾರ್ಪೋರೇಟ್ ಸಂಸ್ಥೆಗಳ ಸಿಎಸ್‌ಆರ್ ನಿಧಿ ಬಳಕೆ ಮಾಡಿಕೊಂಡು ಕೆಪಿಎಸ್ ಶಾಲೆಗಳಿಗೆ ಅಗತ್ಯವಿರುವ ಮೂಲಸೌಕರ್ಯ ಒದಗಿಸಲಾಗುತ್ತದೆ. ನಿಧಿ ಸಂಗ್ರಹ ಉಪಮುಖ್ಯಮಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ. ಮುಂದಿನ ಮೂರು ವರ್ಷಗಳಲ್ಲಿ 3 ಸಾವಿರ ಕೆಪಿಎಸ್ ತೆರೆಯುವ ಗುರಿ ಹೊಂದಿದ್ದೇವೆ. 2024-25ನೇ ಸಾಲಿನಲ್ಲಿ 500 ಕೆಪಿಎಸ್ ತೆರೆಯಲಿದ್ದೇವೆ. ಜತೆಗೆ ಈಗ ಇರುವ ಸರಕಾರಿ ಪ್ರಾಥಮಿಕ, ಪ್ರೌಢಶಾಲೆಗಳನ್ನೇ ಕೆಪಿಎಸ್ ಆಗಿ ಉನ್ನತೀಕರಿಸಲಾಗುತ್ತದೆ ಎಂದರು.
ಶಾಲಾ ಪ್ರವೇಶ ವಯೋಮಿತಿ ಸಡಿಲಿಕೆ ಇಲ್ಲ… ಎಲ್‌ಕೆಜಿಗೆ ಸೇರಲು 4 ವರ್ಷ ಆಗಲೇ ಬೇಕು ಎನ್ನುವ ಕಠಿನ ನಿಯಮದಿಂದ ಪಾಲಕ, ಪೋಷಕರು ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ಪ್ರಕ್ರಿಯಿಸಿದ ಮಧು ಬಂಗಾರಪ್ಪ, ಸದ್ಯ ತಿದ್ದುಪಡಿಯ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಿಯಮಾನುಸಾರ ತಜ್ಞರ ಸಲಹೆಯಂತೆ ತೆಗೆದುಕೊಂಡ ನಿರ್ಧಾರ ಇದು. ಯಾವುದೇ ರೀತಿಯ ಬದಲಾವಣೆ ಅಥವಾ ವ್ಯತ್ಯಾಸ ಮಾಡಿದರೂ ಸಮಸ್ಯೆ ಆಗಬಹುದು. ಹೀಗಾಗಿ ಸದ್ಯ ಹೇಗಿದೆಯೋ ಹಾಗೆ ಮುಂದುವರಿಯಲಿದೆ. ಭವಿಷ್ಯದಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕು ಎಂದರು.