ಮಾರ್ವಾಡಿಗಳಿಗೆ ಅನಗತ್ಯ ತೊಂದರೆ ಕೊಡುವುದನ್ನು ಬಿಜೆಪಿ ಸಹಿಸಲ್ಲ: ಕುಯಿಲಾಡಿ
ಉಡುಪಿ: ಹಲವಾರು ವೈವಿಧ್ಯತೆ ಹೊಂದಿರುವ ಉಡುಪಿಯಲ್ಲಿ ಕೆಲವರು ‘ಮಾರ್ವಾಡಿ ಹಠಾವೊ’ ಅಭಿಯಾನ ನಡೆಸುತ್ತಿರುವುದು ಸಮಂಜಸವಲ್ಲ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅಸಮಾಧಾನ ವ್ಯಕ್ತಪಡಿಸಿದರು. ಮಂಗಳವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ‘ಉಡುಪಿಯಲ್ಲಿ ದುರುದ್ದೇಶಪೂರಿತ ‘ಹಠಾವೋ’ ಅಭಿಯಾನ ನಡಸುವುದನ್ನು ಬಿಜೆಪಿ ಖಂಡಿಸುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ‘ಮಾರ್ವಾಡಿ ಹಠಾವೋ’ ಅಭಿಯಾನಕ್ಕೆ ಕರೆ ನೀಡಿರುವುದು ಸರಿಯಲ್ಲ ಎಂದರು. ‘ಏಕ್ ಭಾರತ್, ಶೇಷ್ಠ ಭಾರತ್’ ಎಂಬ ಪ್ರಧಾನಿ ನರೇಂದ್ರ ಮೋದಿ ಪರಿಕಲ್ಪನೆಯಂತೆ ದೇಶದೆಲ್ಲೆಡೆ ವಿವಿಧ ಸಮುದಾಯಗಳ ಜನರು ವಿವಿಧ ರಾಜ್ಯಗಳಲ್ಲಿ ಯಶಸ್ವಿಯಾಗಿ ಉದ್ಯಮವನ್ನು ನಡೆಸಿಕೊಂಡು ಸ್ವಾವಲಂಬನೆಯ ಚಿಂತನೆಯ ಜೊತೆಗೆ ರಾಷ್ಟ್ರದ ಆರ್ಥಿಕತೆಗೆ ವಿಶೇಷ ಕೊಡುಗೆ ನೀಡುತ್ತಿದ್ದಾರೆ. ದೇಶದ ಪ್ರಜೆ ಯಾವುದೇ ಭಾಗದಲ್ಲಿ ಜೀವನೋಪಾಯಕ್ಕಾಗಿ ವ್ಯವಹಾರ ನಡೆಸಲು ಅವಕಾಶವಿದೆ. ಅದರಂತೆ, ಉಡುಪಿ ಮೂಲದ ಸಾವಿರಾರು ಉದ್ಯಮಿಗಳು ದೇಶ-ವಿದೇಶಗಳಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಉಡುಪಿ ಹೋಟೆಲ್‍ಗಳು ದೇಶದಾದ್ಯಂತ ಪ್ರಸಿದ್ಧಿ ಪಡೆದಿವೆ. ಅದರಂತೆ, ಮಾರ್ವಾಡಿಗಳು ಕೂಡ ದೇಶದಾದ್ಯಂತ ವ್ಯವಹಾರ ನಡೆಸುತ್ತಿದ್ದು ಉಡುಪಿಯಲ್ಲಿಯೂ ಉದ್ಯಮ ಹೊಂದಿದ್ದಾರೆ. ಹೀಗಿರುವಾಗ ‘ಮಾರ್ವಾಡಿ ಹಠಾವೋ’ ಅಭಿಯಾನದ ಮೂಲಕ ಅವರಿಗೆ ಅನಗತ್ಯ ತೊಂದರೆ ಕೊಡುವುದನ್ನು ಬಿಜೆಪಿ ಖಂಡಿಸುತ್ತದೆ ಎಂದು ಕುಯಿಲಾಡಿ ಹೇಳಿದರು. ‘ಸಬ್ಕಾ ಸಾಥ್ ಸಬ್ಕಾ ವಿಕಾಸ್’ ಎಂಬ ಸಹಭಾಳ್ವೆಯ ತತ್ವದಲ್ಲಿ ನಂಬಿಕೆ ಇರಿಸಿರುವ ಬಿಜೆಪಿ, ಒಂದು ನಿರ್ಧಿಷ್ಟ ಸಮುದಾಯವನ್ನು ಗುರಿಯಾಗಿಸಿ ಹಠಾವೋ ಅಭಿಯಾನ ಮಾಡುವುದನ್ನು ಖಂಡಿಸುತ್ತದೆ. ಜಿಲ್ಲೆಯಲ್ಲಿ ಉದ್ದಿಮೆದಾರರು ಹಾಗೂ ವ್ಯವಹಾರಸ್ಥರು ಗೊಂದಲಕ್ಕೀಡಾಗುವ ಅಗತ್ಯವಿಲ್ಲ. ಬಿಜೆಪಿ ಎಲ್ಲ ವರ್ಗದ ವ್ಯವಹಾರಸ್ಥರ ಜೊತೆಗೆ ನಿಲ್ಲಲಿದೆ’ ಎಂದರು. ಹಿಂದೆಯೂ ಉಡುಪಿಯಲ್ಲಿ ಬೇರೆ ರಾಜ್ಯಗಳ ವ್ಯವಹಾರಸ್ಥರಿಗೆ ತೊಂದರೆಯಾದ ಸಂದರ್ಭದಲ್ಲಿ ಬಿಜೆಪಿ ಧೈರ್ಯ ತುಂಬಿದೆ. ಪ್ರಾದೇಶಿಕವಾರು ಹೇಳಿಕೆಗಳು ದೇಶದ ಏಕತೆಗೆ ಮಾರಕವಾಗಿವೆ. ದೇಶದ ಅಖಂಡತೆ, ಏಕತೆ ಹಾಗೂ ಸಮಗ್ರತೆಗೆ ಕೊಡುಗೆ ನೀಡುವುದು ಇಂದಿನ ಅಗತ್ಯವಿದೆ ಎಂದು ಕುಯಿಲಾಡಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ಗುರುಪ್ರಸಾದ್ ಶೆಟ್ಟಿ ಕಟಪಾಡಿ, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಮಾಧ್ಯಮ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಉಪಸ್ಥಿತರಿದ್ದರು. |
marwadi galu, namma tulunada janara kasubabbu nasha madutha iddu, avaru sanghtitha wagi mula udupi garannu kone ganisu tha iddare. kadime daradalli kelvomme thuka dalli veythyasa madirudu halovomme sabeethgide. ega BJP ge avaru hanavenu kottirabeku, illadidare mula udupigraa para mathdudannu bittu parurinda bandu nelsiruva, marawai mathu malayali galar para mathduthiddare.