ಕಾಂಗ್ರೆಸ್ ಇಂದು ವಿಶ್ವಾಸದ ಮೇಲೆಯೇ ಅಧಿಕಾರಕ್ಕೆ ಬಂದಿದೆ- ಯಾವುದೇ ಬಂಡಾಯ ಪಕ್ಷಕ್ಕೆ ತೊಡಕಾಗಲ್ಲ- ಮಧು ಬಂಗಾರಪ್ಪ
ಉಡುಪಿ, ಮೇ 20: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಬಂಡಾಯವಾಗಿ ಸ್ಪರ್ಧಿಸಿರುವವರಿಂದ ಯಾವುದೇ ರೀತಿಯ ಹೊಡೆತ ಬೀಳಲ್ಲ. ನೈರುತ್ಯ ಪದವೀಧರ ಕ್ಷೇತ್ರದಿಂದ ಆಯನೂರು ಮಂಜುನಾಥ್ ಹಾಗೂ ಶಿಕ್ಷಕರ ಕ್ಷೇತ್ರದಿಂದ ಡಾ.ಕೆ.ಕೆ.ಮಂಜುನಾಥ್ ಕುಮಾರ್ ಸೇರಿದಂತೆ ಎಲ್ಲ ಆರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ಇದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಉಡುಪಿ ಕಾಂಗ್ರೆಸ್ ಭವನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಮತ್ತು ನಮ್ಮ ಆರು ಅಭ್ಯರ್ಥಿಗಳು ಗೆಲ್ಲಬೇಕು ಎಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ಅದರಂತೆ ನಮ್ಮ ಎಲ್ಲ ವರಿಷ್ಠರು, ನಾಯಕರು ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.
ಬಂಡಾಯ ಎಂಬುದು ಎಲ್ಲ ಪಕ್ಷದಲ್ಲೂ ಇರುತ್ತದೆ. ಬಿಜೆಪಿಯಲ್ಲೂ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಇಂದು ವಿಶ್ವಾಸದ ಮೇಲೆಯೇ ಅಧಿಕಾರಕ್ಕೆ ಬಂದಿದೆ. ಎಲ್ಲ ಐದು ಗ್ಯಾರಂಟಿಗಳನ್ನು ಅನುಷ್ಠಾನ ಮಾಡಲಾಗಿದೆ. ಈ ಯೋಜನೆ ಲೋಕಸಭಾ ಹಾಗೂ ಈ ವಿಧಾನ ಪರಿಷತ್ ಚುನಾವಣೆಗೂ ಸಹಾಯ ಆಗುತ್ತದೆ ಎಂಬ ವಿಶ್ವಾಸ ಇದೆ ಎಂದು ಅವರು ತಿಳಿಸಿದರು.
ಆಯನೂರು ಯಾವುದೇ ಟಿಕೆಟ್ ಆಸೆಯಿಂದ ಪಕ್ಷ ಸೇರಿಲ್ಲ. ಹೈಕಮಾಂಡ್ ತೀರ್ಮಾನದಂತೆ ಇವರನ್ನು ಕಣಕ್ಕೆ ಇಳಿಸಲಾಗಿದೆ. ಪಕ್ಷ ಸಿದ್ಧಾಂತದ ಒಪ್ಪಿ ಸೇರಿದ ನಂತರ ಅವರು ನಮ್ಮವರೇ ಆಗಿದ್ದಾರೆ. ಬಂಡಾಯವಾಗಿ ಸ್ಪರ್ಧಿಸಿರುವ ಎಸ್.ಪಿ.ದಿನೇಶ್ ಅವರಿಗೆ ಈ ಹಿಂದೆ ಎರಡು ಬಾರಿ ಅವಕಾಶ ನೀಡಲಾಗಿತ್ತು. ದಿನೇಶ್ ಅವರಿಗೆ ಕಣದಿಂದ ಹಿಂದಕ್ಕೆ ಸರಿಯುವಂತೆ ಮನವಿ ಮಾಡಲಾಗಿದೆ. ಈ ಚುನಾವಣೆಯಲ್ಲಿ ಅಭ್ಯರ್ಥಿಗಳಿಗಿಂತ ಪಕ್ಷವೇ ಕ್ಷೇತ್ರಕ್ಕೆ ಇಳಿದು ಕಾರ್ಯ ನಿರ್ವಹಿಸಬೇಕಾಗುತ್ತದೆ. ಆದುದರಿಂದ ಈ ಚುನಾವಣೆಯಲ್ಲಿ ಬಂಡಾಯದ ಹೊಡೆತ ನಮಗೆ ಬೀಳಲ್ಲ ಎಂದು ಅವರು ಹೇಳಿದರು.
ಆಯನೂರು ಮಂಜುನಾಥ್ ಮಾತನಾಡಿ, ಕಳೆದ ಬಾರಿ ವಿಧಾನ ಪರಿಷತ್ ಸದಸ್ಯನಾಗಿ ಕ್ಷೇತ್ರದ ಸಮಸ್ಯೆಗೆ ಗಟ್ಟಿ ಧ್ವನಿಯಾಗಿ ಕೆಲಸ ಮಾಡಿದ್ದೇನೆ. ಇದೀಗ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯನ್ನು ಮುಂದೆ ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇನೆ. ನೌಕರರ, ಶಿಕ್ಷಕರ ಸೇರಿದಂತೆ ಪದವೀಧರರ ನಿರುದ್ಯೋಗ ಸೇರಿದಂತೆ ಎಳ್ಲ ರೀತಿಯ ಸಮಸ್ಯೆಗಳ ಸಮರ್ಥವಾಗಿ ಪರಿಹರಿಸಲು ಪ್ರಯತ್ನ ಮಾಡುತ್ತೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶಿಕ್ಷಕರ ಕ್ಷೇತ್ರದಿಂದ ಡಾ.ಕೆ.ಕೆ. ಮಂಜುನಾಥ್ ಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಮುಖಂಡರಾದ ಮಮತಾ ಗಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಐವನ್ ಡಿಸೋಜ, ಎಂ.ಎ. ಗಫೂರ್, ಟಿ.ಎಂ.ಶಾಹಿದ್, ಪಿ.ಎಂ.ಮುಹಮ್ಮದ್, ಉದಯ ಶೆಟ್ಟಿ ಮುನಿಯಾಲು, ಪ್ರಸಾದ್‌ರಾಜ್ ಕಾಂಚನ್, ಹರೀಶ್ ಕಿಣಿ, ರಮೇಶ್ ಕಾಂಚನ್ ಉಪಸ್ಥಿತರಿದ್ದರು.