ಮಹಾನ್ ಕಲಾಸಾಧಕರ ಒಡನಾಟ ನನ್ನ ಕಲಾ ಬದುಕನ್ನು ರೂಪಿಸಿತು- ಗುರುರಾಜ್ ಮಾರ್ಪಳ್ಳಿ

Oplus_131072

ಉಡುಪಿ: ಯಕ್ಷಗಾನ ಕಲಾರಂಗ ಐವೈಸಿ ಸಭಾಂಗಣದಲ್ಲಿ 40 ಸಾವಿರ ನಗದು ಪುರಸ್ಕಾರಗಳನ್ನೊಳಗೊಂಡ ತಲ್ಲೂರು ಕನಕಾ ಅಣ್ಣಯ್ಯ ಶೆಟ್ಟಿ ಸ್ಮರಣಾರ್ಥ ಯಕ್ಷಗಾನ ಕಲಾರಂಗ ಪ್ರಶಸ್ತಿಯನ್ನು ಬಹುಮುಖೀ ಕಲಾ ಸಾಧಕ ಗುರುರಾಜ ಮಾರ್ಪಳ್ಳಿ ಅವರಿಗೆ ಪ್ರದಾನ ಮಾಡಲಾಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ತಲ್ಲೂರು ಫ್ಯಾಮಿಲಿ ಟ್ರಸ್ಟ್​ ಪ್ರವರ್ತಕ ಹಾಗೂ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಯಕ್ಷಗಾನ ವಿದ್ವಾಂಸರನ್ನು ಗುರುತಿಸುವ ನಿಟ್ಟಿನಲ್ಲಿ ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿಯನ್ನು 2013ರಲ್ಲಿ ಪ್ರಾರಂಭಿಸಲಾಗಿದ್ದು, ಈವರೆಗೆ 12ಕ್ಕೂ ಅಧಿಕ ವಿದ್ವಾಂಸರನ್ನು ಗೌರವಿಸಲಾಗಿದೆ ಎಂದು ಹೇಳಿದರು.

ಗುರುರಾಜ ಮಾರ್ಪಳ್ಳಿ ಅವರು ಪ್ರಸಿದ್ಧಿಯ ಗೊಡವೆಯೇ ಇಲ್ಲದೆ ಸಾಧನೆ ಮಾಡಿರುವ ಅಪರೂಪದ ವ್ಯಕ್ತಿ ಎಂದು ಹೇಳಿದರು.

ನನ್ನ ಮನೆಯ ಪರಿಸ್ಥಿತಿ ಮತ್ತು ಕಲಾಸಕ್ತಿ ನಾನು ಸದಾ ಕಲೆಯಲ್ಲಿ ಕ್ರಿಯಾಶೀಲನಾಗಲು ಕಾರಣವಾಯಿತು. ನಾನು ಒಂದು ಕಡೆ ನೆಲೆ ನಿಲ್ಲದೆ ಕಲೆಗಾಗಿ ಅಲೆದಾಡಿದೆ. ಇದರಿಂದ ಹಲವು ಶ್ರೇಷ್ಠ ಕಲಾ ಸಾಧಕರ ಒಡನಾಟದ ಭಾಗ್ಯ ಲಭಿಸಿತು. ಹೊಸತನ್ನು ಅನ್ವೇಷಿಸುವ ನನ್ನ ಸ್ವಭಾವಕ್ಕೆ ಅವರೆಲ್ಲ ತಮ್ಮ ಅನುಭವ ಧಾರೆ ಎರೆದರು. ಕಲಾ ಕ್ಷೇತ್ರದ ಅನ್ಯಾನ್ಯ ಪ್ರಕಾರಗಳಲ್ಲಿ ಪ್ರಯೋಗ ನಡೆಸುತ್ತಾ ಸಾಗಿದೆ ಎಂದು ಗುರುರಾಜ ಮಾರ್ಪಳ್ಳಿ ಹೇಳಿದರು.

ಹಿರಿಯ ವಿದ್ವಾಂಸ ಪ್ರ್ರೊ.ಎಂ.ಎಲ್​.ಸಾಮಗ ಅಭಿನಂದನ ಭಾಷಣ ಮಾಡಿದರು. ಹಿರಿಯ ಪ್ರಸಂಗಕರ್ತ ಶ್ರೀಧರ ಡಿ.ಎಸ್​.ಅಭ್ಯಾಗತರಾಗಿದ್ದರು. ಟ್ರಸ್ಟ್​ನ ಗಿರಿಜಾ ಶಿವರಾಮ ಶೆಟ್ಟಿ, ಕಾರ್ಯದರ್ಶಿ ಮುರಲಿ ಕಡೆಕಾರ್​ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ ರಾವ್​ ಸ್ವಾಗತಿಸಿ, ನಾರಾಯಣ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮ ಬಳಿಕ ಗುರುರಾಜ ಮಾರ್ಪಳ್ಳಿಯವರ ನಿರೂಪಣೆಯಲ್ಲಿ ಯಕ್ಷಗಾನ ಭಾಗವತಿಕೆ -ಗಮಕಗಳ ಸಂಶೋಧನಾತ್ಮಕ ಅಧ್ಯಯನ ಪ್ರಸ್ತುತಿಪಡಿಸಲಾಯಿತು. ಭಾಗವತರಾಗಿ ಶಶಿಕಿರಣ್​ ಮಣಿಪಾಲ್​, ಮದ್ದಲೆ ವಾದಕರಾಗಿ ಕೂಡ್ಲಿ ದೇವದಾಸ್​ ರಾವ್​, ಗಮಕ ವಿಶ್ಲೇಷಣಗಾರರಾಗಿ ಅರವಿಂದ ಹೆಬ್ಬಾರ್​, ರವಿಕಿರಣ್​ ಮಣಿಪಾಲ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!