ತೆರಿಗೆ ಸಂಗ್ರಹ ಹೆಚ್ಚಿಸಿ, ಭ್ರಷ್ಟಾಚಾರ ತಗ್ಗಿಸಿ, ಹಣಕಾಸು ಪರಿಸ್ಥಿತಿ ನಿಭಾಯಿಸಿದ್ದೇವೆ, ಗ್ಯಾರಂಟಿಗಳು ನಿಲ್ಲುವುದಿಲ್ಲ- ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಇಂದು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮ ಸಂವಾದದಲ್ಲಿ ಮಾತನಾಡಿದರು. ರಾಜ್ಯ ಸರ್ಕಾರದ ಖಾತರಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಪುನರುಚ್ಛರಿಸುವುದರ ಜೊತೆಗೆ ಅಭಿವೃದ್ಧಿ ಕಾಮಗಾರಿಗಳನ್ನೂ ಕೈಗೆತ್ತಿಕೊಳ್ಳುತ್ತಿದ್ದೇವೆ ಎಂದು ಭರವಸೆ ನೀಡಿದ್ದಾರೆ.
ಕಾನೂನು ಪ್ರಕಾರ ತೆರಿಗೆ ಮತ್ತು ಸಾಲವನ್ನು ಹೆಚ್ಚಿಸಿ ಭ್ರಷ್ಟಾಚಾರವನ್ನು ಕಡಿಮೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರವು ಖಾತರಿ ಯೋಜನೆಗಳಿಗೆ ಹಣಕಾಸು ನಿರ್ವಹಿಸಲು ಸಮರ್ಥವಾಗಿದೆ ಎಂದರು.
ಗ್ಯಾರಂಟಿಗಳು ನಿಲ್ಲುವುದಿಲ್ಲ: ಲೋಕಸಭೆ ಚುನಾವಣೆಯ ನಂತರ ಕಾಂಗ್ರೆಸ್ ಸರ್ಕಾರದ ಖಾತರಿ ಯೋಜನೆಗಳು ನಿಲ್ಲುತ್ತವೆ ಎಂದು ವಿರೋಧ ಪಕ್ಷದ ನಾಯಕರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ, ನಮ್ಮ ಖಾತರಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದ ಯಾವುದೇ ಹಣಕಾಸಿನ ನೆರವು ಕೋರಿಲ್ಲ ಎಂದರು.
ಕಳೆದ ವರ್ಷ ಮೇ 20ರಂದು ನಾವು ಪ್ರಮಾಣ ವಚನ ಸ್ವೀಕರಿಸಿದ ನಂತರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ವೇಳೆ ಐದು ಖಾತರಿಗಳನ್ನು ಜಾರಿಗೆ ತರಲು ಕ್ಯಾಬಿನೆಟ್ ನಿರ್ಧಾರ ಮಾಡಿರುವ ಬಗ್ಗೆ ಪ್ರಕಟಿಸಿದ್ದೆವು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಒಂಬತ್ತು ತಿಂಗಳಲ್ಲೇ ಐದನ್ನೂ ಜಾರಿಗೆ ತಂದಿದ್ದು, 2023-24ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಇದಕ್ಕೆ 36,000 ಕೋಟಿ ರೂಪಾಯಿ ಖರ್ಚು ಮಾಡಿದೆ ಎಂದರು.
ಖಾತರಿ ಯೋಜನೆಗಳ ಅನುಷ್ಠಾನದ ಬಗ್ಗೆ ಸಂಶಯ ವ್ಯಕ್ತಪಡಿಸಿದ ಬಿಜೆಪಿಯ ಎಲ್ಲಾ ಆರೋಪಗಳು ತಪ್ಪಾಗಿದೆ. ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿರುವ ಹಿನ್ನೆಲೆಯಲ್ಲಿ ರೈತರಿಗೆ 18 ಸಾವಿರ ಕೋಟಿ ಪರಿಹಾರ ನೀಡುವಂತೆ ಕೋರಿದ್ದು, ಕೇವಲ ಶೇ 19ರಷ್ಟು ಮಾತ್ರ ಕೇಂದ್ರ ಸರ್ಕರದಿಂದ ಬಂದಿದೆ ಎಂದರು.
ಸಚಿವ ಸಂಪುಟ ಪುನರ್ ರಚನೆ ಇಲ್ಲ: ಲೋಕಸಭೆ ಚುನಾವಣೆ ಫಲಿತಾಂಶ ಬಳಿಕ ರಾಜ್ಯ ಸಚಿವ ಸಂಪುಟ ಪುನರ್ ರಚನೆ ಮಾಡುವ ಯೋಚನೆ ಇಲ್ಲ. ರಾಜ್ಯದ 28 ಲೋಕಸಭಾ ಸ್ಥಾನಗಳ ಪೈಕಿ ಕಾಂಗ್ರೆಸ್ 15 ರಿಂದ 20 ಸ್ಥಾನಗಳನ್ನು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ ಸರ್ಕಾರ ಇತರೆ ಹಿಂದುಳಿದ ಜಾತಿಗಳ ಮೀಸಲಾತಿ ತೆಗೆದು ಅಲ್ಪಸಂಖ್ಯಾತರಿಗೆ ನೀಡಲಿದೆ ಎಂದು ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಇದೇ ಸಂದರ್ಭದಲ್ಲಿ ಸಿಎಂ ವಾಗ್ದಾಳಿ ನಡೆಸಿದರು. ಕರ್ನಾಟಕದಲ್ಲಿ 1994ರಿಂದ ಅಲ್ಪಸಂಖ್ಯಾತರಿಗೆ ಶೇ.4ರಷ್ಟು ಮೀಸಲಾತಿ ನೀಡಲಾಗುತ್ತಿದ್ದು, ಬಸವರಾಜ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಇದನ್ನು ಕಸಿದುಕೊಂಡು ಒಕ್ಕಲಿಗ ಮತ್ತು ಲಿಂಗಾಯತರಿಗೆ ತಲಾ ಶೇ.2ರಷ್ಟು ಮೀಸಲಾತಿ ನೀಡಲು ಪ್ರಯತ್ನಿಸಿದರು. ನಾವು ಒಬಿಸಿಯಿಂದ ಮೀಸಲಾತಿಯನ್ನು ತೆಗೆದುಹಾಕಿಲ್ಲ ಎಂದರು.
ತಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಹಿಂದಿನ ಬಿಜೆಪಿ ಸರ್ಕಾರ ಗುತ್ತಿಗೆದಾರರಿಂದ ಶೇಕಡಾ 40ರಷ್ಟು ಕಮಿಷನ್ ಮತ್ತು ಕೋವಿಡ್ ಸಮಯದಲ್ಲಿ ಅಕ್ರಮಗಳ ಬಗ್ಗೆ ತನಿಖೆ ಮಾಡಲು ಎರಡು ಆಯೋಗಗಳನ್ನು ರಚಿಸಿತು. ಸದ್ಯ ತನಿಖೆ ನಡೆಯುತ್ತಿದೆ. ನಮ್ಮ ಸರ್ಕಾರ ಬಂದ ನಂತರ ಭ್ರಷ್ಟಾಚಾರ ನಿಂತಿದೆ ಎಂದು ಹೇಳಲು ಸಾಧ್ಯವಿಲ್ಲ, ಭ್ರಷ್ಟಾಚಾರ ಎಂಬುದು ಸಮಾಜದಲ್ಲಿ ಒಂದು ರೋಗ. ಆದರೆ ಅದನ್ನು ನಿಯಂತ್ರಿಸುವ ಪ್ರಯತ್ನ ಮಾಡಿದ್ದೇವೆ ಎಂದರು.
ಜಾತಿ ಗಣತಿ ಮಾಡುವುದಿಲ್ಲ ಎಂದು ಹಲವರು ಟೀಕಿಸಿದರೂ ನಾವು ಮಾಡಿದ್ದೇವೆ. ನಮಗೆ ಸ್ವಾತಂತ್ರ್ಯ ಸಿಕ್ಕಿ 76 ವರ್ಷಗಳಲ್ಲಿ ಅನೇಕ ವಿಷಯಗಳು ಬದಲಾಗಿವೆ, ಇದನ್ನು ನಾವು ತಿಳಿದುಕೊಳ್ಳಬೇಕು. ಅದಕ್ಕಾಗಿಯೇ ನಮಗೆ ಜಾತಿ ಗಣತಿ ಅಗತ್ಯವಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಆರ್ಥಿಕವಾಗಿ ದುರ್ಬಲವಿರುವ ವರ್ಗಕ್ಕೆ ಶೇ.10ರಷ್ಟು ಮೀಸಲಾತಿಯನ್ನು ಜಾರಿಗೊಳಿಸಿದೆ. ಭಾರತದಲ್ಲಿ ಈಗ ಯಾವ ಸಮುದಾಯವು ಮೀಸಲಾತಿ ವ್ಯಾಪ್ತಿಯಿಂದ ಹೊರಗಿಲ್ಲ. ಹೀಗಾಗಿ ಜನರು ಮೀಸಲಾತಿ ವಿಷಯದಲ್ಲಿ ಪ್ರತಿಭಟಿಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.