ಬ್ರಾಹ್ಮಣ ಮಹಾಸಭಾ ಪುತ್ತೂರು: 20ನೇ ವಾರ್ಷಿಕೋತ್ಸವ
ಉಡುಪಿ: ಬ್ರಾಹ್ಮಣ ಮಹಾಸಭಾ ಪುತ್ತೂರು ವತಿಯಿಂದ ಸಂಭ್ರಮದ 20ನೇ ವಾರ್ಷಿಕೋತ್ಸವ ಸಮಾರಂಭವು ಪುತ್ತೂರಿನ ಶ್ರೀ ಭಗವತೀ ಸಭಾಗೃಹದಲ್ಲಿ ಜರುಗಿತು. ಭಾವಿಪರ್ಯಾಯ ಶ್ರೀ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸಮಾರಂಭವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
ಬಳಿಕ ಅವರು ಮಾತನಾಡುತ್ತಾ ಇಂದಿನ ಯುವ ಪೀಳಿಗೆ ಸಂಘಟನೆಯಿಂದ ವಿಮುಖರಾಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅವರನ್ನು ಕೂಡ ಸೇರಿಸಿ ಕೊಂಡು ಮುಂದುವರಿದಲ್ಲಿ ವಿಪ್ರ ಸಂಘಟನೆಗಳು ಸದೃಢಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ಅಭಿಪ್ರಾಯಪಟ್ಟರು. ಗಾಂಧಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಹರಿಶ್ಚಂದ್ರ, ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸಂದೀಪ್ ಕುಮಾರ್ ಮಂಜ ಮತ್ತು ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ ಪರ್ಕಳ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭಾಶಂಸನೆಗೈದರು. ಅನೇಕ ವರ್ಷಗಳಿಂದ ಗೋಸೇವೆ ಮಾಡುತ್ತಿರುವ ಸುಜಾತ ಬಾಲಕೃಷ್ಣ ಪುತ್ತೂರು, ರವಿಕಾಂತ್ ಭಟ್ ನಿಟ್ಟೂರು ಮತ್ತು ರಾಧಾಕೃಷ್ಣ ಭಟ್ ಪುತ್ತೂರು ಇವರನ್ನು ಗೋಪಾಲಕರ ನೆಲೆಯಲ್ಲಿ ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು. 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು II ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಂಡ ವಲಯದ ವಿದ್ಯಾರ್ಥಿಗಳಾದ ಭಾರ್ಗವಿ ರಾವ್ ಜಿ, ಕಾರುಣ್ಯ ಸೋಮಯಾಜಿ, ಮಾನ್ಯ ತಂತ್ರಿ ಪುತ್ತೂರು, ನೀರಜ್ ಬಾಲಾಜಿ ಬಾಲ್ತಿಲ್ಲಾಯ, ಸಂಚಿತಾ ಜಿ. ಭಟ್, ಅಂಕಿತಾ ಭಟ್, ಮಹಿಮಾ ರಾವ್, ವೈಭವಿ ಆಚಾರ್ಯ, ಪ್ರಮಥ್ ಭಾಗವತ್ ಇವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಆಪತ್ಬಾಂಧವ ಸಮಿತಿಯಿಂದ ಅಶಕ್ತರಿಗೆ ವೈದ್ಯಕೀಯ ಧನಸಹಾಯವಾಗಿ ರೂ. 30,000 ಹಸ್ತಾಂತರಿಸಲಾಯಿತು. ಆಪದ್ಬಾಂಧವ ಸಮಿತಿಗೆ ಹೆಚ್ಚಿನ ರೀತಿಯಲ್ಲಿ ಧನಸಹಾಯ ನೀಡಿದ ದಾನಿಗಳನ್ನು ಗುರುತಿಸಿ ಗೌರವಿಸಲಾಯಿತು. ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.