ರಿಯಾಜ್ ಭಟ್ಕಳ ಸಹಿತ‌ 18 ಮಂದಿ ಹೆಸರು ಭಯೋತ್ಪಾದಕರ ಪಟ್ಟಿಗೆ

ನವದೆಹಲಿ: ದಾವೂದ್ ಇಬ್ರಾಹಿಂ ಸಹಚರ ಚೋಟಾ ಶಕೀಲ್, ಇಂಡಿಯನ್‌ ಮುಜಾಹಿದ್ದೀನ್‌ ಸ್ಥಾಪಿಸಿದ್ದ ಭಟ್ಕಳದ ಸಹೋದರರಾದ ರಿಯಾಜ್‌ ಮತ್ತು ಇಕ್ಬಾಲ್‌ ಸೇರಿ 18 ಜನರನ್ನು ಕಾನೂನುಬಾಹಿರ ಕೃತ್ಯ (ನಿಯಂತ್ರಣ) ಕಾಯ್ದೆ (ಯುಎಪಿಎ) ಅನ್ವಯ ‘ಭಯೋತ್ಪಾದಕರು’ ಎಂದು ಸರ್ಕಾರ ಮಂಗಳವಾರ ಘೋಷಿಸಿದೆ. ‌

ಇದರೊಂದಿಗೆ ಒಟ್ಟು 31 ಜನರನ್ನು ಕಾಯ್ದೆಯ 4ನೇ ಪರಿಚ್ಛೇದದಡಿ ಭಯೋತ್ಪಾದಕರು ಎಂದು ಘೋಷಿಸಿದಂತಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಲಷ್ಕರ್ ಇ ತೊಯಬಾದ ಮುಖ್ಯಸ್ಥ ಹಫೀಜ್‌ ಸಯೀದ್‌, ಭೂಗತದೊರೆ ದಾವೂದ್ ಇಬ್ರಾಹಿಂ ಸೇರಿ ನಾಲ್ವರನ್ನು ಹಾಗೂ ಈ ವರ್ಷದ ಜುಲೈನಲ್ಲಿ ಖಲಿಸ್ತಾನ್‌ ಆಂದೋಲನದಲ್ಲಿ ಭಾಗಿಯಾಗಿದ್ದ 9 ಮಂದಿ ಸಿಖ್ಖರನ್ನು ಭಯೋತ್ಪಾದಕರೆಂದು ಘೋಷಿಸಲಾಗಿತ್ತು.

ಹಿಜ್ಬುಲ್ ಮುಜಾಯಿದ್ದೀನ್‌ ಮುಖ್ಯಸ್ಥ ಸೈಯದ್ ಸಲಾಹುದ್ದೀನ್, 1999ರಲ್ಲಿ ಭಾರತೀಯ ವಿಮಾನ ಅಪಹರಿಸಿದ್ದ ಇಬ್ರಾಹಿಂ ಅತರ್, ಯೂಸುಫ್ ಅಜರ್, ಮುಂಬೈ ಸ್ಫೋಟ ಪ್ರಕರಣದಲ್ಲಿ ಬೇಕಾಗಿರುವ ಪಾಕಿಸ್ತಾನ ಮೂಲದ ಇಬ್ರಾಹಿಂ ಮೆಮನ್ ಈಗ ಘೋಷಿಸಲಾದವರ ಪಟ್ಟಿಯಲ್ಲಿದ್ದಾರೆ.


‘ರಾಷ್ಟ್ರೀಯ ಭದ್ರತೆ ಮತ್ತು ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಸಹಿಸಲಾಗದು ಎಂಬ ಬದ್ಧತೆಗೆ ಅನುಗುಣವಾಗಿ ಮೋದಿ ನೇತೃತ್ವದ ಸರ್ಕಾರ 18 ಮಂದಿಯನ್ನು ಭಯೋತ್ಪಾದಕರು ಎಂದು ಘೋಷಿಸಿದೆ. ಇವರು ವಿವಿಧ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ’ ಎಂದು ಪ್ರಕಟಣೆ ತಿಳಿಸಿದೆ.

ಉಳಿದಂತೆ ಪಟ್ಟಿಯಲ್ಲಿ ಲಷ್ಕರ್ ಎ ತೊಯಬಾ ಸಂಘಟನೆಯ ಪ್ರಮುಖರಾದ ಹಫೀಜ್‌ ಸಯೀದ್‌ ಸಂಬಂಧಿ ಅಬ್ದುರ್ ರೆಹಮಾನ್‌ ಮಕ್ಕಿ, ಮುಂಬೈ ದಾಳಿ ಪ್ರಕರಣದ ಸಂಚು ನಡೆಸಿದ್ದ ಸಾಜಿದ್ ಮಿರ್, ಆ ಪ್ರಕರಣದ ಆರೋಪಿ ಯೂಸುಫ್‌ ಮುಜಮಿಲ್, ಫಲಾ ಇ ಇನ್ಸಾನಿಯತ್ ಫೌಂಡೇಷನ್‌ನ ಉಪ ಮುಖ್ಯಸ್ಥ ಶಾಹೀದ್ ಮೆಹಮೂದ್‌ ಸೇರಿದ್ದಾರೆ.

Leave a Reply

Your email address will not be published. Required fields are marked *

error: Content is protected !!