ಠಾಣೆಗೆ ನುಗ್ಗಿ ಪೊಲೀಸರಿಗೆ ಬೆದರಿಕೆ – ಶಾಸಕ ಹರೀಶ್ ಪೂಂಜ ವಿರುದ್ಧ ಪ್ರಕರಣ ದಾಖಲು
ಬೆಳ್ತಂಗಡಿ: ಅಕ್ರಮ ಕಲ್ಲಿನ ಕೊರೆ ದಾಳಿ ಮಾಡಿ ಆರೋಪಿಯನ್ನು ಬಂಧಿಸಿದ ನಂತರ ಠಾಣೆಗೆ ಬಂದು ಆರೋಪಿಯ ಬಿಡುಗಡೆ ಮಾಡಲು ರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾಗ ಪಿಎಸ್‌ಐಗೆ ಶಾಸಕರು ಬೆದರಿಕೆ ಹಾಕಿ ನಿಂದನೆ ಮಾಡಿರುವ ವಿಡಿಯೋ ವೈರಲ್ ಆಗಿರುವ ಬೆನ್ನಲ್ಲೆ ಶಾಸಕ ಹರೀಶ್ ಪೂಂಜ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇಲಂತಬೆಟ್ಟಿನಲ್ಲಿ ಅಕ್ರಮ ಕಲ್ಲಿನ ಕೊರೆ ಮೇಲೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಮತ್ತು ಬೆಳ್ತಂಗಡಿ ಪೊಲೀಸರು ಮೇ.18 ರಂದು ದಾಳಿ ಮಾಡಿ ಹಿಟಾಚಿ, ಕಂಪ್ರೆಷರ್, ಸ್ಫೋಟಕಗಳನ್ನು ವಶಕ್ಕೆ ಪಡೆದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಮೋದ್ ಗೌಡ ಮತ್ತು ಶಶಿರಾಜ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲು ಮಾಡಿದ್ದರು. ಪ್ರಕರಣ ಸಂಬಂಧ ಶಶಿರಾಜ್ ಶೆಟ್ಟಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದು ಈ ವೇಳೆ ರಾತ್ರೋರಾತ್ರಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತು ಬಿಜೆಪಿ ಕಾರ್ಯಕರ್ತರು ಪೊಲೀಸ್ ಠಾಣೆಯೊಳಗೆ ನುಗ್ಗಿ ಪ್ರತಿಭಟನೆ ನಡೆಸಿ ಶಶಿರಾಜ್ ಬಿಡುಗಡೆ ಮಾಡಲು ಪಟ್ಟು ಹಿಡಿದಿದ್ದರು. ಈ ವೇಳೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಬೆಳ್ತಂಗಡಿ ಸಬ್ ಇನ್ಸೆಕ್ಟರ್ ಮುರಳೀಧರ್ ನಾಯ್ಕ ಜೊತೆ ಬೆದರಿಕೆ ಹಾಕಿ ನಿಂದನೆ ಮಾಡಿರುವ ವಿಡಿಯೋ ವೈರಲ್ ಅಗಿತ್ತು.
ಈ ಪ್ರಕರಣದ ವಿಡಿಯೋ ವೈರಲ್ ಆಗಿರುವ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ಬೆಳ್ತಂಗಡಿ ಸಬ್ ಇನ್ಸೆಕ್ಟರ್ ಮುರಳೀಧರ್ ನಾಯ್ಕ ನೀಡಿದ ದೂರಿನ ಮೇಲೆ ಇಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.