ಜವಾಬ್ದಾರಿಯುತ ಸ್ಥಾನದಲ್ಲಿರುವ ಜಾತಿ-ಧರ್ಮಗಳ ಕುರಿತು ಬೇಧ ಭಾವ ಸೃಷ್ಟಿಸುವಾಗ ಬೇಸರವಾಗುತ್ತದೆ- ಜನಾರ್ದನ ತೋನ್ಸೆ

Oplus_131072

ಉಡುಪಿ: ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳು ಜಾತಿ-ಧರ್ಮಗಳ ಕುರಿತು ಬೇಧ ಭಾವ ಸೃಷ್ಟಿಸುವಾಗ ಬೇಸರವಾಗುತ್ತದೆ ಎಂದು ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಜನಾರ್ಧನ ತೋನ್ಸೆ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಹೂಡೆಯ ಸಾಲಿಹಾತ್ ಅಡಿಟೋರಿಯಮ್ ನಲ್ಲಿ ಜಮಾಅತೆ ಇಸ್ಲಾಮಿ ಹಿಂದ್, ಹೂಡೆ ಆಯೋಜಿಸಿದ ಈದ್ ಸ್ನೇಹ ಕೂಟವನ್ನುದ್ದೇಶಿಸಿ ಮಾತನಾಡಿದರು.

“ಸ್ವಾರ್ಥಕ್ಕಾಗಿ ಧರ್ಮ-ಧರ್ಮಗಳ ನಡುವೆ ಕಂದಕ ಸೃಷ್ಟಿಸುತ್ತಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳು ಜಾತಿ-ಧರ್ಮಗಳ ಕುರಿತು ಬೇಧ ಭಾವ ಸೃಷ್ಟಿಸುವಾಗ ಬೇಸರವಾಗುತ್ತದೆ. ನಮ್ಮಲ್ಲಿ ನೆಲೆ ನಿಂತಿರುವ ಸೌಹರ್ದತೆಯನ್ನು ಕೆಡಿಸುವ ಪ್ರಯತ್ನಗಳು ನಡೆಯುತ್ತಿವೆ. ವಾಸ್ತವವಾಗಿ ನಮ್ಮಲ್ಲಿ ಸೌಹಾರ್ದ ಭಾವ ಹುಟ್ಟಿನಿಂದಲೇ ಇದೆ. ನೇಜಾರಿನಲ್ಲಿ ಕೊಲೆ ಪ್ರಕರಣ ನಡೆದಾಗ ಜಾತಿ-ಧರ್ಮ ಮರೆತು ಜನ ಕಣ್ಣೀರು ಸುರಿಸಿದ್ದೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಸೌಹಾರ್ದತೆಯ ವಾತಾವರಣವನ್ನು ಮತ್ತಷ್ಟು ಉತ್ತೇಜಿಸಲು ಇಂತಹ ಕಾರ್ಯಕ್ರಮಗಳ ಆಯೋಜನೆ ಅತೀ ಅಗತ್ಯ. ಈ ನಿಟ್ಟಿನಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಕಾರ್ಯ ಶ್ಲಾಘನೀಯ. ಅವರು ಜಾತಿ ಮತ ಬೇಧ ಮರೆತು ಜನರ ಸೇವೆ ಮಾಡುತ್ತಾರೆ. ಈ ಸಂಘಟನೆ ಎಲ್ಲ ಸಂಘಟನೆಗಳಿಗೆ ಮಾದರಿ ಎಂದು ಅಭಿಪ್ರಾಯ ಪಟ್ಟರು.

ನಂತರ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ, ಉಡುಪಿ ಮಾತನಾಡಿ, “ಧರ್ಮಗಳ ನಡುವೆ ಭಿನ್ನತೆ ಇರುವುದು ವಾಸ್ತವ. ಆದರೆ ಆ ಭಿನ್ನತೆ ಇಟ್ಟುಕೊಂಡು ಪರಸ್ಪರ ಸೌಹರ್ದಯುತವಾಗಿ ಬದುಕುವ ವಾತಾವರಣ ಸೃಷ್ಟಿಯಾಗಬೇಕಾಗಿದೆ” ಎಂದರು.

ದೇಶವನ್ನು ಧರ್ಮದ ಹೆಸರಿನಲ್ಲಿ ಒಡೆಯಲು ಪ್ರಯತ್ನಿಸುವವರ ಪ್ರಯತ್ನ ವಿಫಲ ಮಾಡಲು ನಿಜವಾಗಿಯೂ ಧರ್ಮವನ್ನು ಪ್ರೀತಿಸುವ ಜನ ಒಂದಾಗಬೇಕು. ಪ್ರತಿಯೊಂದು ಹಬ್ಬಗಳನ್ನು ಜೊತೆಯಾಗಿ ಆಚರಿಸಬೇಕು. ಧರ್ಮಗಳ ವಿಚಾರ ಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳ ಬೇಕೆಂದರು. ಧರ್ಮಗಳೆಂದರೆ ಮನುಷ್ಯರನ್ನು ಮನುಷ್ಯರೊಂದಿಗೆ ಜೋಡಿಸಬೇಕು. ಜನರ ನಡುವೆ ಕಂದಕ ಸೃಷ್ಟಿಸುವುದು “ಅಧರ್ಮ” ಮಾತ್ರ ಎಂದು ಹೇಳಿದರು.

ಜಮಾಅತೆ ಇಸ್ಲಾಮಿ ಹಿಂದ್, ಹೂಡೆಯ ಅಧ್ಯಕ್ಷರಾದ ಅಬ್ದುಲ್ ಕಾದೀರ್ ಮೊಯ್ದಿನ್ ಪ್ರಸ್ತಾವಿಕವಾಗಿ ಮಾತನಾಡಿದರು. ಮೌಲನ ಮುಹಮ್ಮದ್ ತಾರೀಕ್ ಕುರ್’ಆನ್ ಪಠಣ ಮಾಡಿದರು. ಯಾಸೀನ್ ಕೋಡಿಬೆಂಗ್ರೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

ಕಾರ್ಯಕ್ರಮದಲ್ಲಿ ಮೌಲನ ಆದಮ್ ಸಾಹೇಬ್, ಕೆಮ್ಮಣ್ಣು ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮ, ಉಪಾಧ್ಯಕ್ಷ ಅರುಣ್ ಫರ್ನಾಂಡೀಸ್, ಸಾಲಿಡಾರಿಟಿ ಹೂಡೆ ಅಧ್ಯಕ್ಷ ಜಾಬೀರ್ ಖತೀಬ್, ಎಸ್.ಐ.ಓ ಹೂಡೆ ಘಟಕಾಧ್ಯಕ್ಷ ಝೀಶಾನ್ ಹೂಡೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!