ಕಳಪೆ ಗುಣಮಟ್ಟದ ಸೋನ್‍ ಪಾಪ್ಡಿ: ಪತಂಜಲಿಯ ಇಬ್ಬರು ಅಧಿಕಾರಿಗಳಿಗೆ ಜೈಲು

ಪಿತೋರ್‍ಗಢ: ಪತಂಜಲಿ ಬ್ರಾಂಡ್‍ನ ಸೋನ್ ಪಾಪ್ಡಿ, ಆಹಾರ ಗುಣಮಟ್ಟ ಪರೀಕ್ಷೆಯಲ್ಲಿ ಕಳಪೆ ಎಂದು ದೃಢಪಟ್ಟ ಹಿನ್ನೆಲೆಯಲ್ಲಿ ಪತಂಜಲಿ ಆಯರ್ವೇದ ಲಿಮಿಟೆಡ್‍ನ ಸಹಾಯಕ ವ್ಯವಸ್ಥಾಪಕ ಸೇರಿದಂತೆ ಮೂರು ಮಂದಿಗೆ ಆರು ತಿಂಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಇಲ್ಲಿನ ಚೀಫ್ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ತೀರ್ಪು ನೀಡಿದೆ.

ಪತಂಜಲಿಯ ನವರಾತ್ರಾ ಏಲಕ್ಕಿ ಸೋನ್‍ಪಾಪ್ಡಿ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತವಾದ ಹಿನ್ನೆಲೆಯಲ್ಲಿ ಪಿತೋರ್‍ಗಢದ ಬೆರಿನಾಗ್ ಮುಖ್ಯಮಾರುಕಟ್ಟೆಯ ಮಳಿಗೆಯೊಂದಕ್ಕೆ 2019ರ ಅಕ್ಟೋಬರ್ 17ರಂದು ಆಹಾರ ಸುರಕ್ಷಾ ಅಧೀಕ್ಷಕರು ಭೇಟಿ ನೀಡಿದ್ದರು. ಮಾದರಿಗಳನ್ನು ಪಡೆದು ಕನಾಹಾ ಜಿ ರಾಮನಗರ ವಿತರಕ ಮತ್ತು ಪತಂಜಲಿ ಆಯುರ್ವೇದ ಸಂಸ್ಥೆಗೆ ನೋಟಿಸ್ ನೀಡಿದ್ದರು. ಉಧಾಮ್‍ಸಿಂಗ್‍ನಗರ ಜಿಲ್ಲೆಯ ರುದ್ರಾಪುರದ ರಾಜ್ಯ ಆಹಾರ ಮತ್ತು ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ 2019ರ ಮೇ 18ರಂದು ಗುಣಮಟ್ಟ ಪರೀಕ್ಷೆ ನಡೆದಿತ್ತು.

ಈ ಸಿಹಿತಿನಸಿನ ಗುಣಮಟ್ಟ ಕಳಪೆ ಎಂದು 2020ರ ಡಿಸೆಂಬರ್‍ನಲ್ಲಿ ಪ್ರಯೋಗಾಲಯ ವರದಿ ನೀಡಿತ್ತು. ಆ ಬಳಿಕ ಉದ್ಯಮಿ ಲೀಲಾ ಧರ್ ಪಾಟಕ್, ವಿತರಕ ಜಯ್ ಜೋಶಿ ಹಾಗೂ ಪತಂಜಲಿಯ ಸಹಾಯಕ ವ್ಯವಸ್ಥಾಪಕ ಅಭಿಷೇಕ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಮೂರೂ ಮಂದಿ ಅರೋಪಿಗಳಿಗೆ ಅಹಾರ ಸುರಕ್ಷಾ ಮತ್ತು ಗುಣಮಟ್ಟ ಕಾಯ್ದೆ-2006ರ ಅಡಿಯಲ್ಲಿ ತಲಾ ಆರು ತಿಂಗಳು ಜೈಲು ಶಿಕ್ಷೆ ಹಾಗೂ ಪಾಠಕ್, ಜೋಶಿ ಹಾಗೂ ಕುಮಾರ್ ಅವರಿಗೆ ಕ್ರಮವಾಗಿ 5 ಸಾವಿರ, 10 ಸಾವಿರ ಹಾಗೂ 25 ಸಾವಿರ ರೂ. ದಂಡ ವಿಧಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!