ನಗರ ನಕ್ಸಲೈಟ್‌ಗಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರು ಈಗ ಬಿಜೆಪಿ ಅಭ್ಯರ್ಥಿ- ಕೆ. ರಘುಪತಿ ಭಟ್
ಮಂಗಳೂರು: ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೆತ್ರದ ಟಿಕೆಟ್ ನೀಡುವುದಾಗಿ ಬಿಜೆಪಿ ಹಿರಿಯರು ತಿಳಿಸಿ, ಸಿದ್ಧತೆ ನಡೆಸಲು ಸೂಚಿಸಿದ್ದರು. ಆದರೆ, ಕರಾವಳಿಯ ಬಿಜೆಪಿ ಕಾರ್ಯಕರ್ತರನ್ನು ನಿರ್ಲಕ್ಷಿಸಿ ಟಿಕೆಟ್ ಘೋಷಿಸಲಾಗಿದೆ. ಕಾರ್ಯಕರ್ತರ ಧ್ವನಿಯಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದು, ಪದವೀಧರ ಮತದಾರರು ಬೆಂಬಲಿಸ ಬೇಕು ಎಂದು ವಿಧಾನ ಪರಿಷತ್ ನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ರಘುಪತಿ ಭಟ್ ಹೇಳಿದರು.
ಶನಿವಾರ ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಆರೋಪ ಮಾಡಿದ ಅವರು, ಮೂರು ಬಾರಿ ಶಾಸಕನಾಗಿ ಕೆಲಸ ಮಾಡಿ ಅನುಭವವಿರುವ ನಾನು ಪದವೀಧರರ ಸಮಸ್ಯೆಗಳ ಪರಿಹಾರಕ್ಕೆ ಕೆಲಸ ಮಾಡುತ್ತೇನೆ. ಪಕ್ಷದ ಹಿರಿಯರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿದ ಕಾರಣ ನಾನು ಸ್ಪರ್ಧಿಸಿದ್ದೇನೆ. ಪಕ್ಷಕ್ಕಾಗಿ 25-30 ವರ್ಷ ಕೆಲಸ ಮಾಡಿದ ಹಿರಿಯರಿಗೆ ಟಿಕೆಟ್ ನೀಡಿದ್ದರೆ ನಾನು ಸ್ಪರ್ಧಿಸುತ್ತಿರಲಿಲ್ಲ. ಬಿಜೆಪಿ ಟಿಕೆಟ್ ನೀಡಿರುವ ಡಾ. ಧನಂಜಯ ಸರ್ಜಿ ಅವರು ಶಿವಮೊಗ್ಗದಲ್ಲಿ ಹರ್ಷ ಕೊಲೆ ನಡೆದಾಗ ಸಂಘಪರಿವಾರದ ವಿರುದ್ಧ ನಡೆದ ಕಮ್ಯುನಿಷ್ಟರ, ನಗರ ನಕ್ಸಲೈಟ್‌ಗಳ ಶಾಂತಿಗಾಗಿ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಂತವರು ಈಗ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ ಎಂದು ಆರೋಪಿಸಿದರು.
ಪದವೀಧರರಿಗೆ ಪದವಿ ನಂತರ ಕಾಡುವ ಉದ್ಯೊಗಕ್ಕೆ ನೆಟ್‌ವರ್ಕ್ ಡಾಟಾಬೇಸ್‌ಗಳ ಸ್ಥಾಪನೆ, ಸರಕಾರಿ ಹುದ್ದೆಗಳ ಪರೀಕ್ಷೆ ನಡೆದ ಕಾಲಮಿತಿಯಲ್ಲಿ ಫಲಿತಾಂಶ ಪ್ರಕಟ, ಕ್ಷಿಪ್ರನೇಮಕಾತಿಗಾಗಿ ಒತ್ತಾಯ,ಪದವೀಧರರಿಗೆ ಸ್ವ ಉದ್ಯೊಗಕ್ಕಾಗಿ ಸಾಲ ಮುಂತಾದ ಸರಕಾರಿ ಸಹಾಯಗಳಿಗೆ ಸಿಂಗಲ್ ವಿಂಡೋ ಸ್ಥಾಪನೆ, ಪದವೀಧರರಿಗೆ ಕೌಶಲ್ಯ ತರಬೇತಿ, ಸ್ಥಳೀಯ ಜಿಲ್ಲೆಗಳಲ್ಲಿ ಉದ್ಯಮ ಬಯಸುವ ಪದವೀಧರರಿಗೆ ಪೂರಕ ಉದ್ಯಮ ವಲಯದ ಸೃಷ್ಟಿಗೆ ಕ್ರಮಕ್ಕಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದವರು ಹೇಳಿದರು.
ಈಗೆಲ್ಲ ಜಾತಿ ಮೇಲೆ ಚುನಾವಣೆ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮಂತಹ ಸಣ್ಣ ಜಾತಿಗೆ ರಾಜಕೀಯ ಮಾಡೋದು ಬಹಳ ಕಷ್ಟವಿದೆ. ನನ್ನ ನೈತಿಕತೆಯಿಂದ ನಾನು ಪಕ್ಷದ ವಿರುದ್ಧ ಹೋಗಿದ್ದೇನೆ ಎಂದು ನನಗೆ ಅನಿಸಲ್ಲ. ನಾನು ಗೆದ್ದರೂ ಬಿಜೆಪಿ, ಗೆದ್ದ ಮೇಲೂ ನಾನು ಬಿಜೆಪಿ ಕಚೇರಿಗೆ ಹೋಗುತ್ತೇನೆ. ಸೋತರೂ ನನ್ನನ್ನು ಉಚ್ಚಾಟನೆ ಮಾಡಿದ್ರೂ,ನಾನು ಬಿಜೆಪಿ ಕಾರ್ಯಕರ್ತನ್ನಾಗಿ ಕೆಲಸ ಮಾಡುತ್ತೇನೆ. ಇದು ಸರ್ಕಾರ ರಚಿಸುವ ಚುನಾವಣೆಯಲ್ಲ. ಕರಾವಳಿಗೆ ಆದ ಅನ್ಯಾಯ, ಆಯ್ಕೆಯಲ್ಲಿ ತೆಗೆದುಕೊಂಡ ಮಾನ ದಂಡ. ಯಾರನ್ನೂ ಸೋಲಿಸಲು ನಾನು ನಿಲ್ತಾ ಇಲ್ಲ. ಶಾಸಕನಾಗಿ ಯಾವ ರೀತಿ ಕೆಲಸ ಮಾಡಿದ್ದೇನೆ ಅದೆ ರೀತಿ ಇಲ್ಲೂ ಗೆದ್ದು ಕೆಲಸ ಮಾಡುತ್ತೇನೆ. ವಿಧಾನ ಸಭೆಯಲ್ಲಿ 4 ಕ್ಷೇತ್ರದ ಅಭ್ಯರ್ಥಿ ಬದಲಾವಣೆ ಮಾಡಿದ್ರು. ಆದರೂ ನಾವು ಪಕ್ಷಕ್ಕೋಸ್ಕರ ದುಡಿದಿದ್ದೇವೆ, ಅಭ್ಯರ್ಥಿಗಳನ್ನ ಗೆಲ್ಲಿಸಿ ತಂದಿದ್ದೇವೆ. ಎರಡೆರಡು ಚುನಾವಣೆಯಲ್ಲಿ ಸೀಟ್ ನಿರಾಕರಿಸಿದಾಗ ಪಕ್ಷದ ಪರವಾಗಿ ಕೆಲಸ ಮಾಡಿದ್ದು ನಾನೊಬ್ಬನೇ. ಮೊನ್ನೆ ಘೋಷಣೆ ಯಾಗುವವರೆಗೂ ಜೀವ ಬಿಟ್ಟು ಕೆಲಸ ಮಾಡಿದ್ದೇನೆ ಎಂದು ಹೇಳಿದರು.
ಮಾಜಿ ಕಾರ್ಪೋರೇಟರ್ ನವಿನ್ ಚಂದ್ರ, ಡಾ. ಶಿವಶರಣ್ ಶೆಟ್ಟಿ ಉಪಸ್ಥಿತರಿದ್ದರು.
‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈತಪ್ಪಿದಾಗ ಪಕ್ಷಕ್ಕಾಗಿ ಕೆಲಸ ಮಾಡಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದೆ. ಲೋಕಸಭಾ ಚುನಾವಣೆ ವೇಳೆಯೂ ಶಿವಮೊಗ್ಗ ಕ್ಷೆತ್ರದ ಪ್ರಭಾರಿಯಾಗಿ 42 ದಿನ ಕೆಲಸ ಮಾಡಿದ್ದೆ. ವಿಧಾನ ಪರಿಷತ್ ಚುನಾವಣೆಯ ಟಿಕೆಟ್ ನನಗೆ ನೀಡುವ ಭರವಸೆ ನೀಡಲಾಗಿತ್ತು. ಆದರೆ, ಕರಾವಳಿಯ ಬಿಜೆಪಿ ಕಾರ್ಯಕರ್ತರನ್ನು ಟೇಕನ್ ಫಾರ್ ಗ್ರ್ಯಾಂಟೆಡ್ ಎಂದು ಬಿಜೆಪಿ ಹೈಕಮಾಂಡ್ ಭಾವಿಸಿದೆ. ಪಕ್ಷಕ್ಕಾಗಿ ದುಡಿದವರನ್ನು ನಿರ್ಲಕ್ಷ್ಯ ಮಾಡಿ ಒಂದೂವರೆ ವರ್ಷದ ಹಿಂದೆ ಪಕ್ಷಕ್ಕೆ ಬಂದವರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿ ಹಿರಿಯರ ಈ ಧೋರಣೆ ವಿರೋಧಿಸಿ ಸ್ಪರ್ಧೆ ನಡೆಸುತ್ತಿದ್ದೇನೆ.’
-ಕೆ. ರಘುಪತಿ ಭಟ್.
Correct decision. Good luck