ಮಧುಮೇಹ, ಹೃದ್ರೋಗ ರೋಗಿಗಳಿಗೆ ಸಿಹಿ ಸುದ್ದಿ: 41 ಔಷಧಿಗಳ ಬೆಲೆ ಕಡಿತಗೊಳಿಸಿದ ಕೇಂದ್ರ ಸರ್ಕಾರ
ನವದೆಹಲಿ: ಮಧುಮೇಹ, ಹೃದ್ರೋಗ ಮತ್ತು ಯಕೃತ್ತಿನ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಸಾಮಾನ್ಯವಾಗಿ ಬಳಸುವ 41 ಔಷಧಿಗಳ ಬೆಲೆಯನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ.
ಆಂಟಾಸಿಡ್‌ಗಳು, ಮಲ್ಟಿವಿಟಮಿನ್‌ಗಳು ಮತ್ತು ಆಂಟಿಬಯೋಟಿಕ್‌ಗಳು ಸೇರಿದಂತೆ 41 ಔಷಧಿಗಳ ಬೆಲೆಯನ್ನು ಔಷಧ ಇಲಾಖೆ ಮತ್ತು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ (ಎನ್‌ಪಿಪಿಎ) ಇಳಿಕೆ ಮಾಡಿದೆ. ತಕ್ಷಣವೇ ಜಾರಿಗೆ ಬರುವಂತೆ ಕಡಿತ ಮಾಡಲಾಗಿರುವ ಔಷಧಿಗಳ ಬಗ್ಗೆ ಡೀಲರ್‌ಗಳು ಮತ್ತು ದಾಸ್ತಾನುಗಾರರಿಗೆ ಮಾಹಿತಿ ನೀಡುವಂತೆ ಫಾರ್ಮಾ ಕಂಪನಿಗಳಿಗೆ ಸೂಚಿಸಲಾಗಿದೆ. ಅಗತ್ಯ ಔಷಧಿಗಳ ಬೆಲೆಗಳು ಸಾರ್ವಜನಿಕರಿಗೆ ಕೈಗೆಟುಕುವಂತೆ ಇರುವುದನ್ನು ಖಚಿತಪಡಿಸಿಕೊಳ್ಳಲು NPPAಯ 143ನೇ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ವಿಶ್ವದಲ್ಲಿ ಅತಿ ಹೆಚ್ಚು ಮಧುಮೇಹ ಹೊಂದಿರುವ ದೇಶಗಳಲ್ಲಿ ಭಾರತವೂ ಒಂದು. ಇನ್ನು 10 ಕೋಟಿಗೂ ಹೆಚ್ಚು ಮಧುಮೇಹ ರೋಗಿಗಳು ಔಷಧಿ ದರ ಕಡಿತದಿಂದ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ.
ಕಳೆದ ತಿಂಗಳು, ಫಾರ್ಮಾಸ್ಯುಟಿಕಲ್ಸ್ ಇಲಾಖೆಯು 923 ನಿಗದಿತ ಔಷಧ ಸೂತ್ರೀಕರಣಗಳಿಗೆ ವಾರ್ಷಿಕ ಪರಿಷ್ಕೃತ ಬೆಲೆಗಳನ್ನು ಮತ್ತು 65 ಫಾರ್ಮುಲೇಶನ್ ಗಳಿಗೆ ಪರಿಷ್ಕೃತ ಚಿಲ್ಲರೆ ಬೆಲೆಗಳನ್ನು ಏಪ್ರಿಲ್ 1ರಿಂದ ಜಾರಿಗೆ ತಂದಿತ್ತು.