ಉಡುಪಿ: ಶಿಕ್ಷಕರು, ನೌಕರರ ಪರ ಹೋರಾಟಕ್ಕೆ ಸದಾಸಿದ್ಧ- ಆಯನೂರು ಮಂಜುನಾಥ

ಉಡುಪಿ: ನನ್ನ ರಾಜಕೀಯ ಬದುಕಿನಲ್ಲಿ ಕಾರ್ಮಿಕರು, ಸರಕಾರಿ ನೌಕರರು ಹಾಗೂ ಶಿಕ್ಷಕರ ಪರವಾಗಿ ಹೋರಾಟ ನಡೆಸುತ್ತಾ ಬಂದಿದ್ದು, ಅವರ ಸಮಸ್ಯೆಗಳ ಕುರಿತು ವಿಧಾನಮಂಡಲದಲ್ಲಿ ಸರಕಾರದ ಗಮನ ಸೆಳೆದಿದ್ದೆ. ಈ ಬಾರಿ ನೈರುತ್ಯ ಪದವೀಧರ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಪರವಾಗಿ ಸ್ಪರ್ಧಿಸುತ್ತಿರುವುದಾಗಿ ಆಯನೂರು ಮಂಜುನಾಥ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು ದಾವಣಗೆರೆ (ಹೊನ್ನಾಳಿ, ನ್ಯಾಮತಿ, ಚನ್ನಗಿರಿ) ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಒಟ್ಟು 84,000 ಪದವೀಧರ ಮತದಾರರು ನೊಂದಾಯಿಸಿಕೊಂಡಿದ್ದು, ಉಡುಪಿ ಜಿಲ್ಲೆಯಲ್ಲಿ 14,000 ಮತದಾರರು ಇದ್ದಾರೆ. 30 ವಿಧಾನಸಭಾ ಹಾಗೂ ಐದು ಲೋಕಸಭಾ ಕ್ಷೇತ್ರಗಳು ಇದರ ವ್ಯಾಪ್ತಿಗೆ ಬರುತ್ತವೆ ಎಂದರು.

ಲೋಕಸಭಾ, ರಾಜ್ಯಸಭಾ, ವಿಧಾನಸಭಾ ಹಾಗೂ ವಿಧಾನಪರಿಷತ್ ಸದಸ್ಯನಾಗಿ ಅನುಭವ ಪಡೆದಿರುವ ತಾನು ಗ್ರಾಮೀಣ ಹಿನ್ನೆಲೆಯಿಂದ ಬಂದಿದ್ದೇನೆ. ಕಾರ್ಮಿಕ, ನೌಕರರ ಸಂಘಟನೆಯ ಹಿನ್ನೆಲೆಯಿರುವ ತನಗೆ ಮತ್ತೊಮ್ಮೆ ನಿಮ್ಮ ಧ್ವನಿಯಾಗುವ ಅವಕಾಶ ನೀಡಿದರೆ, ಧರ್ಮ, ಜಾತಿ, ವರ್ಗ ಯಾವುದನ್ನೂ ಗಮನಿಸದೇ ನಿಮ್ಮೆಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುವುದಾಗಿ ತಿಳಿಸಿದರು.

2018ರಲ್ಲಿ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಸ್ಪರ್ಧಿಸಿ 26,000ಕ್ಕೂ ಅಧಿಕ ಪ್ರಥಮ ಪ್ರಾಶಸ್ತ್ಯದ ದಾಖಲೆ ಮತ ಗಳೊಂದಿಗೆ ಆಯ್ಕೆಯಾಗಿರುವ ಆಯನೂರು, ಆಡಳಿತ ಪಕ್ಷದ ಸದಸ್ಯನಾಗಿ ಸರಕಾರದ ವಿರುದ್ಧವೇ ಮಾತನಾಡಿ ಶಿಕ್ಷಕರಿಗೆ, ನೌಕರಿಗೆ ಹಲವು ಸೌಲಭ್ಯ ಗಳನ್ನು ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾಗಿ ಹೇಳಿದರು.

ಬಸವರಾಜ ಬೊಮ್ಮಾಯಿ ಸರಕಾರ ಒಂದು ಐಫೋನ್ ಕಂಪೆನಿ ಪರವಾಗಿ ಕಾರ್ಮಿಕ ಕಾಯ್ದೆಯನ್ನೇ ಬದಲಿಸಿ ಎಂಟು ಗಂಟೆಯ ಬದಲು 12 ಗಂಟೆ ಕೆಲಸದ ನಿಯಮ ಜಾರಿಗೊಳಿಸಿದಾಗ ಅದನ್ನು ಏಕಾಂಗಿಯಾಗಿ ಎದುರಿಸಿ ನಿಂತು ತಡೆದಿದ್ದೇನೆ ಎಂದ ಆಯನೂರು, ಸರಕಾರಿ ನೌಕರರ ಹಳೆ ಪಿಂಚಣಿ ಯೋಜನೆಯ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮನದಟ್ಟು ಮಾಡಿದ್ದು, ಸರಕಾರ ಒಪ್ಪಿಗೆ ಸೂಚಿಸುವುದು ಖಂಡಿತ ಎಂದರು.

ಕಾಂಗ್ರೆಸ್ ಸರಕಾರವೇ ರಾಜ್ಯದಲ್ಲಿ ಆಡಳಿತದಲ್ಲಿರುವುದರಿಂದ ಕಾಂಗ್ರೆಸ್ ಸದಸ್ಯರಾಗಿ ಕಾರ್ಮಿಕರ ಹಾಗೂ ನೌಕರರ ಬೇಡಿಕೆಗಳನ್ನು ಈಡೇರಿಸಲು ಸಹಾಯಕವಾಗಲಿದೆ. ಹೀಗಾಗಿ ತಮ್ಮನು ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಕೆ.ಕೆ.ಮಂಜುನಾಥ್ ಇವರಿಗೆ ಮತ ನೀಡಿ ಆಶೀರ್ವದಿಸುವಂತೆ ವಿನಂತಿಸುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕಕುಮಾರ ಕೊಡವೂರು, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ನಾಯಕರಾದ ಪ್ರಸಾದ್‌ರಾಜ್ ಕಾಂಚನ್, ಎಂ.ಎ.ಗಫೂರ್, ದಿನೇಶ್ ಮೊಳಹಳ್ಳಿ, ರಮೇಶ್ ಕಾಂಚನ್, ಭಾಸ್ಕರ ರಾವ್ ಕಿದಿಯೂರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!