ಮುಂಬೈ ಹೋರ್ಡಿಂಗ್‌ ಕುಸಿದ ಪ್ರಕರಣ- ಮೃತರ ಸಂಖ್ಯೆ 14ಕ್ಕೆ ಏರಿಕೆ, 74 ಮಂದಿಗೆ ಗಾಯ

ಮುಂಬಯಿ: ಭಾರೀ ಬಿರುಗಾಳಿ ಸಹಿತ ಮಳೆಗೆ ನಿನ್ನೆ ಮುಂಬೈನ ಘಾಟ್ಕೋಪರ್‌ನ ಪೆಟ್ರೋಲ್ ಬಂಕ್ ಮೇಲೆ ಬೃಹತ್ ಗಾತ್ರದ ಜಾಹೀರಾತು ಫಲಕ ಬಿದ್ದ ಪ್ರಕರಣದಲ್ಲಿ ಮೃತರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ ಅಲ್ಲದೆ 74 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಗರದಲ್ಲಿ ಸೋಮವಾರ ಬಿರುಗಾಳಿ ಸಹಿತ ಭಾರೀ ಮಳೆಯಾಗಿದ್ದು ಹಲವೆಡೆ ಮರಗಳು ಧರೆಗುರುಳಿವೆ, ಅಲ್ಲದೆ ಜನಜೀವನ ಅಸ್ತವ್ಯಸ್ತಗೊಂಡಿದೆ, ಇದೆ ವೇಳೆ ಪಂತನಗರದ ಈಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯ ಬಳಿ ಇರುವ ಪೆಟ್ರೋಲ್ ಬಂಕ್ ಮೇಲೆ ಅತೀ ದೊಡ್ಡ ಹೋರ್ಡಿಂಗ್ ಕುಸಿದು ಬಿದ್ದ ಪರಿಣಾಮ ಪೆಟ್ರೋಲ್ ಬಂಕ್ ಸೇರಿದಂತೆ ಹಲವಾರು ಕಾರುಗಳ ಮೇಲೆ ಬಿದ್ದಿದೆ ಪರಿಣಾಮ ಎಪ್ಪತ್ತಕ್ಕೂ ಹೆಚ್ಚು ಮಂದಿ ಅವಶೇಷಗಳಿ ಸಿಲುಕಿದ್ದರು ಕೂಡಲೇ ಕಾರ್ಯಪ್ರವೃತ್ತರಾದ ರಕ್ಷಣಾ ತಂಡ ಅವಶೇಷಗಳಡಿ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಆದರೆ ಈ ಅವಘಡದಲ್ಲಿ ಇದುವರೆಗೆ ಸುಮಾರು ಹದಿನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದ್ದು ಜೊತೆಗೆ 74 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ ಘಟನಾ ಸ್ಥಳದಲ್ಲಿ ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೋರ್ಡಿಂಗ್ ಮಾಲೀಕನ ವಿರುದ್ಧ ಪ್ರಕರಣ
ಹದಿನಾಲ್ಕು ಜನರ ಜೀವ ತೆಗೆದುಕೊಂಡ ಹೋರ್ಡಿಂಗ್ಸ್ ಅಳವಡಿಸಿದ್ದ ಅದರ ಮಾಲೀಕ ಭವೇಶ್ ಭಿಡೆ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಭವೇಶ್ ಭಿಂಡೆ ಇಗೋ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ನಿರ್ದೇಶಕರಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ರಕ್ಷಣಾ ತಂಡದಿಂದ ಕಾರ್ಯಾಚರಣೆ:
ಘಟನಾ ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆ ಆಯುಕ್ತ ಭೂಷಣ್ ಗಗ್ರಾನಿ (ಬಿಎಂಸಿ) ತಿಳಿಸಿದ್ದಾರೆ.

ಮಿತಿಗಿಂತ ಹೆಚ್ಚಿನ ಗಾತ್ರದ ಹೋರ್ಡಿಂಗ್ ಅಳವಡಿಕೆ:
ಮಿತಿಗಿಂತ ದೊಡ್ಡ ಪ್ರಮಾಣದಲ್ಲಿ ಹೋರ್ಡಿಂಗ್ ಹಾಕಿದ್ದ ಏಜೆನ್ಸಿಗೆ ಮುಂಬೈ ಮಹಾನಗರ ಪಾಲಿಕೆ ನೋಟಿಸ್ ಜಾರಿ ಮಾಡಿದೆ. ಮುಂಬೈ ಮಹಾನಗರ ಪಾಲಿಕೆಯ ಸೂಚನೆಯಂತೆ ಗರಿಷ್ಠ 40×40 ಚದರ ಅಡಿ ಗಾತ್ರದ ಹೋರ್ಡಿಂಗ್ ಅಳವಡಿಕೆಗೆ ಅವಕಾಶ ನೀಡಲಾಗಿದೆ ಆದರೆ ನಿನ್ನೆ ಕುಸಿದು ಬಿದ್ದಿರುವ ಹೋರ್ಡಿಂಗ್ಸ್ 120×120 ಚದರ ಅಡಿ ಗಾತ್ರದ್ದಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ಅನುಮತಿ ಪಡೆಯದೆ ಅಳವಡಿಕೆ
ಮುಂಬಯಿಯಲ್ಲಿ ಇದೆ ರೀತಿಯ ಒಟ್ಟು ನಾಲ್ಕು ಹೋರ್ಡಿಂಗ್‌ಗಳಿಗೆ ಇಗೋ ಮೀಡಿಯಾ ನಿರ್ಮಿಸಿದ್ದು, ಹೋರ್ಡಿಂಗ್ ನಿರ್ಮಿಸುವ ಮೊದಲು ಮುಂಬೈ ಮಹಾನಗರ ಪಾಲಿಕೆಯಿಂದ ಯಾವುದೇ ಅನುಮತಿ ಪಡೆದಿಲ್ಲ ಎಂದು ಹೇಳಲಾಗಿದೆ.

ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ: ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಅವಲೋಕಿಸಿದರು. ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗುವುದು ಮತ್ತು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು. ಮುಂದಿನ ದಿನಗಳಲ್ಲಿ ಇಂತಹ ದುರ್ಘಟನೆಗಳನ್ನು ತಡೆಯಲು ಮಹಾನಗರ ಮುಂಬೈಯಲ್ಲಿರುವ ಜಾಹೀರಾತು ಫಲಕಗಳ ಲೆಕ್ಕಪರಿಶೋಧನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಮುಂಬೈ ಮತ್ತು ಅದರ ಉಪನಗರಗಳಲ್ಲಿ ಸ್ಕ್ಯಾಫೋಲ್ಡಿಂಗ್ ಕುಸಿತದ ಇದೇ ರೀತಿಯ ಘಟನೆಗಳು ವರದಿಯಾಗಿವೆ. ಜೋಗೇಶ್ವರಿ ನಗರದಲ್ಲಿ ಬೀಸಿದ ಗಾಳಿಗೆ ಮರ ಉರುಳಿ ಆಟೋರಿಕ್ಷಾ ಮೇಲೆ ಬಿದ್ದಿದೆ. ಚಾಲಕ ಗಾಯಗೊಂಡಿದ್ದು, ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!