ಕೈ ತಪ್ಪಿದ ವಿಧಾನ ಪರಿಷತ್ ಟಿಕೆಟ್- ಮಾಜಿ ಶಾಸಕ ರಘುಪತಿ ಭಟ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ
ಉಡುಪಿ, ಮೇ13(ಉಡುಪಿ ಟೈಮ್ಸ್ ವರದಿ): ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಮಾಜಿ ಶಾಸಕ ಕೆ. ರಘುಪತಿ ಭಟ್ ಅವರು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿಯೂ ಪಕ್ಷವು ಉಡುಪಿ ವಿಧಾನಸಭಾ ಕ್ಷೇತ್ರದ ಟಿಕೆಟ್ ನಿರಾಕರಿಸಿತ್ತು.ಆ ಸಂದರ್ಭದಲ್ಲಿಯೂ ಭಟ್ ಅವರು ಬೇಸರಗೊಂಡಿದ್ದರು. ಬಳಿಕ ಪಕ್ಷದ ವರಿಷ್ಠರು ವಿಧಾನ ಪರಿಷತ್ ನಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಆ ಬಳಿಕ ಪಕ್ಷದ ಅಧಿಕೃತ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿ, ಅಭ್ಯರ್ಥಿಯ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ, ಲೋಕಸಭೆ ಚುನಾವಣೆಯಲ್ಲೂ ಶಿವಮೊಗ್ಗ ಕ್ಷೇತ್ರದ ಉಸ್ತುವಾರಿಯನ್ನು ವಹಿಸಿಕೊಂಡು ಅಭ್ಯರ್ಥಿಯ ಪರವಾಗಿ ಉತ್ತಮವಾಗಿ ಕೆಲಸ ಮಾಡಿದ್ದರು.
ನೈರುತ್ಯ ಪದವೀಧರ ಕ್ಷೇತ್ರದ ಟಿಕೆಟ್ ನಿರೀಕ್ಷೆಯಲ್ಲಿದ್ದ ರಘುಪತಿ ಭಟ್ ಅವರಿಗೆ ಕಡೆ ಕ್ಷಣದಲ್ಲಿ ಪಕ್ಷವು ಕೈಕೊಟ್ಟಿದೆ. ಶಿವಮೊಗ್ಗದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಮೂಲಕ ಭಟ್ ಆಸೆಗೆ ತಣ್ಣೀರೆರಚಿದೆ. ಪಕ್ಷದ ನಿರ್ಧಾರದಿಂದ ತೀವ್ರ ಅಸಮಾಧಾನ ಗೊಂಡಿರುವ ಭಟ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ತೀರ್ಮಾನಿಸಿದ್ದಾರೆ.
ಪದವೀಧರರ ಹೊಸ ಮತದಾರ ಸೇರ್ಪಡೆಗೆ ತುಂಬಾ ಪ್ರಯತ್ನ ಮಾಡಿದ್ದೇನೆ. 36 ಸಾವಿರ ಹೊಸ ಮತದಾರ ಸೇರ್ಪಡೆ ಮಾಡಲು ಕಾರ್ಯಕರ್ತರ ಜೊತೆ ಶ್ರಮಿಸಿದ್ದೇನೆ. ಇದೇ ಪದವೀಧರರು ಒತ್ತಡ ಹಾಕಿ ನಿಮಗೆ ತುಂಬಾ ಅನ್ಯಾಯ ಆಗಿದ್ದು, ಕೆಲಸಗಾರನನ್ನು ಪಕ್ಷವು ನಿರ್ಲಕ್ಷ್ಯಿಸಿರುವುದು ದುರಂತ ಎಂದು ಸಿಡಿಮಿಡಿಗೊಂಡಿದ್ದಾರೆ.
ಕಾಂಗ್ರೆಸ್‌ನಿಂದ ಇತ್ತೀಚೆಗೆ ಬಂದ ಮುಖಂಡನಿಗೆ ಹೈಕಮಾಂಡ್ ಮಣೆ ಹಾಕಿದ್ದು ಬೇಸರ ಆಗಿದೆ. ಹಿರಿಯ ಕಾರ್ಯಕರ್ತನಿಗೆ ನೀಡಿದ್ದರೆ ನಾನು ಗೌರವಿಸುತ್ತಿದ್ದೆ. ಗಿರೀಶ್ ಪಾಟೀಲ್, ದತ್ತಾತ್ರೆಯ , ಜ್ಞಾನೇಶ, ವಿಕಾಸ್ ಪುತ್ತೂರು ಇದ್ದರು. ಅವರಿಗೆ ನೀಡದರೂ ನಾನು ದುಡಿಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದುಡಿದ ಕಾರ್ಯಕರ್ತನಿಗೆ ನೀಡದೆ, ಇತ್ತೀಚೆಗೆ ಬಂದ ನಾಯಕನಿಗೆ ನೀಡಿದ್ದು ಬಹಳ ಬೇಸರವಾಗಿದೆ ಎಂದರು.