ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್ ಕೇಸ್‌ಗೆ ಬಿಗ್ ಟ್ವಿಸ್ಟ್: ಕಿಡ್ನಾಪ್ ನಡೆದೇ ಇಲ್ಲಾ ಎಂದ ಸಂತ್ರಸ್ತೆ!
ಹಾಸನ: ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ವಿರುದ್ಧದ ಅಪಹರಣ ಆರೋಪ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ದೊರೆತಿದೆ. ಅಪಹರಿಸಲ್ಪಟ್ಟಿದ್ದರು ಎನ್ನಲಾಗಿರುವ ಸಂತ್ರಸ್ತ ಮಹಿಳೆ ಎಸ್ಐಟಿ ಸುರ್ಪರ್ಧಿಯಲ್ಲಿರುವಾಗಲೇ ಆಕೆಯ ಸ್ಪಷ್ಟೀಕರಣದ ವಿಡಿಯೋವೊಂದು ವೈರಲ್ ಆಗಿದೆ.
ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ ಅಥವಾ ಸತೀಶ್ ಬಾಬು ಅವರಿಂದ ಏನೂ ತೊಂದರೆಯಾಗಿಲ್ಲ. ತಾನು ಅಪಹರಿಸಲ್ಪಟ್ಟಿಲ್ಲ ಎಂದು ಸಂತ್ರಸ್ತೆ ಹೇಳಿರುವುದು ಪ್ರಕರಣಕ್ಕೆ ತಿರುವು ನೀಡಿದೆ.
ಸಂತ್ರಸ್ತೆಯ ಪುತ್ರ ನೀಡಿದ್ದ ದೂರಿನ್ವಯ ಎಚ್.ಡಿ. ರೇವಣ್ಣ ಹಾಗೂ ಸತೀಶ್ ಬಾಬು ವಿರುದ್ದ ಕೆ.ಆರ್. ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಬಳಿಕ ಇಬ್ಬರನ್ನೂ ಬಂಧಿಸಲಾಗಿತ್ತು. ಇದರ ಬೆನ್ನಲೇ ಸಂತ್ರಸ್ತೆಯ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು ಆರೋಪಕ್ಕೆ ವ್ಯತಿರಿಕ್ತವಾಗಿ ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ
ವಿಡಿಯೋಗಳು ವೈರಲ್ ಆದ ಬಳಿಕ ಬೇಸತ್ತು, ಮನಸ್ಸಿಗೆ ನೆಮ್ಮದಿಯಿರದೆ ಸಂಬಂಧಿಕರ ಮನೆಯಲ್ಲಿ ನಾಲ್ಕು ದಿನ ಇದ್ದು ಬರೋಣ ಎಂದು ತೆರಳಿದ್ದೆ. ಆದರೆ, ಈ ರೀತಿಯ ಆರೋಪಗಳು ಬರುತ್ತಿರುವುದನ್ನು ಟಿವಿಯಲ್ಲಿ ನೋಡಿದ ಬಳಿಕ ಈಗ ಮಾತನಾಡುತ್ತಿದ್ದೇನೆ. ನನಗೆ ಎಚ್.ಡಿ.ರೇವಣ್ಣ, ಭವಾನಿ ರೇವಣ್ಣ, ಪ್ರಜ್ವಲ್ ರೇವಣ್ಣ ಅಥವಾ ಸತೀಶ್ ಬಾಬು ಅವರಿಂದ ಏನೂ ತೊಂದರೆಯಾಗಿಲ್ಲ. ನನ್ನನ್ನು ಚೆನ್ನಾಗಿಯೇ ನೋಡಿಕೊಂಡು ಕಳುಹಿಸಿದ್ದಾರೆ. ಯಾರೂ ಕೂಡ ನನ್ನನ್ನು ಅಪಹರಿಸಿಲ್ಲ, ವಿಡಿಯೋಗಳಿಗೂ ಇದಕ್ಕೂ ಸಂಬಂಧವಿಲ್ಲ.
ನಾನು ಸಂಬಂಧಿಕರ ಮನೆಗೆ ಬಂದಿದ್ದೇನೆ, ನನ್ನ ಮಗನೂ ಸಹ ತಲೆಕಡಿಸಿಕೊಳ್ಳುವ ಅಗತ್ಯವಿಲ್ಲ. ನಾನು ಸುರಕ್ಷಿತವಾಗಿದ್ದು, ಇನ್ನೆರಡು ದಿನಗಳಲ್ಲಿ ಮನೆಗೆ ಬರುತ್ತೇನೆ. ಪೊಲೀಸ್, ತನಿಖೆ ಅಂತ ಯಾರು ಮನೆ ಹತ್ರ ಹೋಗಬೇಡಿ, ಮಕ್ಕಳು ಗಾಬರಿಯಾಗುತ್ತಾರೆ. ನಾವು ಕೂಲಿ ಮಾಡಿಕೊಂಡು ಜೀವನ ಸಾಗಿಸುವವರು. ನೀವು ಪದೇ ಪದೇ ಮನೆ ಬಳಿ ಹೋದರೆ ನಮಗೆ ತೊಂದರೆಯಾಗಲಿದೆ. ನನಗೆ ತೊಂದರೆಯಾದರೆ ನಾನೇ ನಿಮ್ಮ ನೆರವು ಕೇಳುತ್ತೇನೆ. ನನಗಾಗಲಿ ಕುಟುಂಬದವರಿಗೆ ಆಗಲಿ, ಗಂಡನಿಗಾಗಲಿ ಏನಾದರೂ ತೊಂದರೆಯಾರೆ ನೀವೇ ಜವಾಬ್ದಾರಿಯಾಗಬೇಕಾಗುತ್ತದೆ. ನನ್ನ ಮಗ ಗೊತ್ತಿಲ್ಲದೇ ಹೀಗೆ ಮಾಡಿಬಿಟ್ಟಿದ್ದಾನೆ, ನಾನೇ ಹೋಗಿದ್ದೇನೆ” ಎಂದು ಸಂತ್ರಸ್ತ ಮಹಿಳೆ ವಿಡಿಯೋದಲ್ಲಿ ಹೇಳಿದ್ದಾರೆ.
ಈ ಮಧ್ಯೆ, ಹುಣಸೂರು ಆಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ‘ಸಂತ್ರಸ್ತ ಮಹಿಳೆ’ ತನ್ನ ಮನೆಗೆ ಬಂದಿದ್ದಾಗಿ ಸಂಬಂಧಿಕನೂ ಹೇಳಿಕೊಂಡಿದ್ದಾನೆ. ಆದರೆ, ಪೊಲೀಸರು ಆಕೆಯನ್ನು ತಮ್ಮ ಮನೆಯಿಂದ ಕರೆದೊಯ್ದಿದ್ದಾರೆ ಎಂದು ಹೇಳಿದ್ದಾರೆ.
ಈ ನಡುವೆ ರೇವಣ್ಣ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ ಎಂದು ಜೆಡಿಎಸ್ ಎಂಎಲ್ ಸಿ ಕೆ.ಟಿ.ಶ್ರೀಕಂಠೇಗೌಡ ಅವರು ತಿಳಿಸಿದ್ದಾರೆ.
ಮಹಿಳೆಯನ್ನು ಅಪಹರಿಸಲಾಗಿಲ್ಲ ಎಂದು ಮಹಿಳೆಯ ಮಗಳು ಮತ್ತು ಅಳಿಯ ಸ್ಪಷ್ಟವಾಗಿ ಹೇಳಿದ್ದಾರೆ. ಮಹಿಳೆ ಹಾಗೂ ಮಹಿಳೆಯ ಕುಟುಂಬಸ್ಥರೇ ಸ್ಪಷ್ಟನೆ ನೀಡಿರುವಾಗ ರೇವಣ್ಣ ವಿರುದ್ಧ ಅಪಹರಣ ಆರೋಪ ಏಕೆ ಮುಂದುವರಿಸಬೇಕು,” ಎಂದು ಪ್ರಶ್ನಿಸಿದ್ದಾರೆ.
ಈ ನಡುವೆ ಸಂತ್ರಸ್ತ ಮಹಿಳೆಯ ಹೇಳಿಕೆ ಸಂಬಂಧ ಪೊಲೀಸರನ್ನು ಸಂಪರ್ಕಿಸಿದಾಗ, ಪ್ರಕರಣವನ್ನು ಎಸ್‌ಐಟಿ ತನಿಖೆ ನಡೆಸುತ್ತಿದೆ. ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಈ ನಡುವೆ ವೈರಲ್ ಆಗಿರುವ ವಿಡಿಯೋ ಕ್ಲಿಪ್‌ನಲ್ಲಿರುವುದು ಸಂತ್ರಸ್ತ ಮಹಿಳೆಯಲ್ಲ. ಆಕೆಯ ಸಂಬಂಧಿ ಎಂದೂ ಕೆಲ ವರದಿಗಳು ತಿಳಿಸಿವೆ.
ಏನೇ ಆದರೂ, ಸಂತ್ರಸ್ತ ಮಹಿಳೆ ಸದ್ಯ ಎಸ್ಐಟಿ ಸುಪರ್ದಿಯಲ್ಲಿರುವಾಗಲೇ ಆಕೆಯ ಹೇಳಿಕೆಯ ವಿಡಿಯೋ ಬಿಡುಗಡೆಯಾಗಿರುವುದು ತನಿಖಾಧಿಕಾರಿಗಳ ಮುಂದೆ ಮತ್ತೊಂದು ಸವಾಲು ಉದ್ಭವಿಸಲು ಕಾರಣವಾಗಿದೆ.
ಮಹಿಳೆಯ ವಿಡಿಯೋ ಹೇಳಿಕೆ ಚಿತ್ರೀಕರಿಸಿದವರು ಯಾರು? ಅದನ್ನ ರಿಲೀಸ್ ಮಾಡಿದ್ದು ಯಾರು..? ಎಸ್ಐಟಿ ಆಕೆಯನ್ನು ರಕ್ಷಿಸುವ ಮೊದಲೇ ವಿಡಿಯೋ ಮಾಡಲಾಗಿತ್ತಾ? ಮಾಡಿದ್ದೆ ಆದರೆ ಮಹಿಳೆಯನ್ನು ಎಲ್ಲಿ ಇರಿಸಿ ವಿಡಿಯೋ ಮಾಡಲಾಗಿತ್ತು? ಮಹಿಳೆ ವಿಡಿಯೋ ರೆಕಾರ್ಡ್ ಆಗಿದ್ದ ಮೊಬೈಲ್ ಯಾವುದು? ಆಕೆ ಸ್ಮಾರ್ಟ್ ಫೋನ್ ಬಳಸುತ್ತಿದ್ದರಾ? ಎಂಬ ಪ್ರಶ್ನೆಗಳು ತನಿಖಾಧಿಕಾರಿಗಳ ಮುಂದೆ ಮೂಡಲಾರಂಭಿಸಿವೆ.
ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಶ್ಲೀಲ ವಿಡಿಯೋಗಳನ್ನ ಬಿಡುಗಡೆ ಮಾಡಿದವರನ್ನ ಪತ್ತೆ ಮಾಡಲು ಇನ್ನೂ ಕೂಡ ಸಾಧ್ಯವಾಗಿಲ್ಲ. ಇದರ ನಡುವೆ ಇದೀಗ ಸಂತ್ರಸ್ತೆಯ ವೀಡಿಯೋದ ಮೂಲ ಹುಡುಕುವುದರ ಬಹುದೊಡ್ಡ ಟಾಸ್ಕ್ ಎಸ್ಐಟಿ ಮುಂದಿದೆ.