ವಿಡಿಯೋ ಕಾಲ್ ರೆಕಾರ್ಡ್ ಮಾಡಿ ಬ್ಲಾಕ್ ಮೇಲ್: ಸಂತೆಕಟ್ಟೆಯ ಯುವಕನಿಗೆ 11.30 ಲಕ್ಷ ರೂ. ಹಣ ವಂಚನೆ
ಉಡುಪಿ, ಮೇ 10: ವಿಡಿಯೋ ಕಾಲ್ ರೆಕಾರ್ಡ್ ಮಾಡಿಕೊಂಡು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿ ಲಕ್ಷಾಂತರ ರೂ. ಹಣ ದೋಚಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತೆಕಟ್ಟೆಯ ಮೂಡುತೋನ್ಸೆಯ ಅಸ್ಟರ್ ಸಾವಿಯೋ ಫೆರ್ನಾಂಡಿಸ್ (28) ಎಂಬವರಿಗೆ ಡೇಟಿಂಗ್ ಆ್ಯಪ್‌ನಲ್ಲಿ ಸಾಚಿ ಜೈನ್ ಎಂಬಾಕೆ ಪರಿಚಯವಾಗಿದ್ದು, ಆ ಬಳಿಕ ಆಕೆಯು ವಾಟ್ಸ್‌ಅಪ್ ನಲ್ಲಿ ಅಸ್ಟರ್ ಜೊತೆ ಚಾಟಿಂಗ್ ಮತ್ತು ವಿಡಿಯೋ ಕಾಲ್ ನಡೆಸುತ್ತಿದ್ದರು, ಮಾತ್ರವಲ್ಲದೆ ಈತ ಅರೆಬೆತ್ತೆಲೆಯಾಗಿ ಆಕೆಯ ಜೊತೆ ಲೈಂಗಿಕ ತೃಷೆಯನ್ನು ನಡೆಸುತ್ತಿದ್ದುದ್ದನ್ನು ವಿಡಿಯೋ ರೆಕಾರ್ಡ್ ಮಾಡಿ, ಅವುಗಳನ್ನು ಅಸ್ಟರ್‌ಗೆ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆಂದು ದೂರಲಾಗಿದೆ.
ಅದರಂತೆ ಅಸ್ಟರ್ ಆರೋಪಿ ತಿಳಿಸಿದ ಬ್ಯಾಂಕ್ ಖಾತೆ ಹಾಗೂ ಯುಪಿಐ ಐಡಿಗಳಿಗೆ ಹಂತ ಹಂತವಾಗಿ 11,30,106ರೂ. ಹಣವನ್ನು ವರ್ಗಾಯಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.