10ನೇ ತರಗತಿ ಪಾಸಾದ ಖುಷಿಯಲ್ಲಿದ್ದ ಬಾಲಕಿಯ ರುಂಡ ಕತ್ತರಿಸಿ ಪರಾರಿಯಾದ ಪಾಪಿ!
ಕೊಡಗು: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಮುಂದೆ ಕಾಲೇಜಿಗೆ ಸೇರಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಾಗಿದ್ದ ವಿದ್ಯಾರ್ಥಿನಿ ಭೀಕರವಾಗಿ ಕೊಲೆಯಾಗಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಿನ್ನೆ ಗುರುವಾರ ನಡೆದುಹೋಗಿದೆ.
ಕೊಡಗಿನ ಸೋಮವಾರಪೇಟೆಯ ಸೂರ್ಲಬ್ಬಿ ಗ್ರಾಮದ 32 ವರ್ಷದ ವ್ಯಕ್ತಿ ಓಂಕಾರಾಪ್ಪ ಕೊಲೆ ಆರೋಪಿ. ಸೂರಬ್ಬಿ ಪ್ರೌಢಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಯು.ಎಸ್.ಮೀನಾ ಹತ್ಯೆಗೀಡಾದ ವಿದ್ಯಾರ್ಥಿನಿ. ಮೀನಾ ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ನಿನ್ನೆ ಗುರುವಾರ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿ ಉತ್ತಮ ಅಂಕ ಪಡೆದು ಪಾಸಾಗಿದ್ದಳು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಸಾದ ಖುಷಿಯಲ್ಲಿ ಮೀನಾ ಮತ್ತು ಆಕೆಯ ಪೋಷಕರು ಇದ್ದರು. ಆದರೆ ಈ ಖುಷಿ ಹೆಚ್ಚು ಹೊತ್ತು ಇರಲಿಲ್ಲ.
ನಿನ್ನೆ ಸಾಯಂಕಾಲ ತನ್ನ ಮನೆಯ ಮುಂದೆಯೇ ದಾರುಣವಾಗಿ ಹತ್ಯೆಗೀಡಾಗಿದ್ದಾಳೆ. ಆರೋಪಿ ಓಂಕಾರಪ್ಪ ಸಾಯಂಕಾಲ ಸಮಯದಲ್ಲಿ ಮೀನಾಳನ್ನು ಆಕೆಯ ಮನೆಗೆ ಬಂದು ಪೋಷಕರ ಎದುರೇ ಎಳೆದುಕೊಂಡು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಮಚ್ಚಿನಿಂದ ತಲೆ ಕತ್ತರಿಸಿ ರುಂಡ-ಮುಂಡ ಬೇರ್ಪಡಿಸಿ ವಿಕೃತಿ ಮೆರೆದು ಪರಾರಿಯಾಗಿದ್ದಾನೆ.
ಕೊಲೆ ನಡೆದಿದ್ದೇಕೆ?: ಓಂಕಾರಪ್ಪನೊಂದಿಗೆ ಮೀನಾಳ ನಿಶ್ಚಿತಾರ್ಥ ನಿನ್ನೆ ನಡೆಯಬೇಕಾಗಿತ್ತಂತೆ. ಈ ವಿಚಾರ ತಿಳಿದ ಗ್ರಾಮಸ್ಥರು ಪೊಲೀಸರು ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ 18 ವರ್ಷ ತುಂಬಿದ ಮೇಲಷ್ಟೇ ಮದುವೆ ಮಾಡಲು ಸಾಧ್ಯ ಎಂದು ಬುದ್ದಿವಾದ ಹೇಳಿ ಹೋಗಿದ್ದರು. ಪೊಲೀಸರು ಕೂಡ ನಿಶ್ಚಿತಾರ್ಥ ನಿಲ್ಲಿಸಿದ್ದರು. ಎರಡೂ ಕುಟುಂಬದವರು ತಮ್ಮ ತಮ್ಮ ಮನೆಗೆ ತೆರಳಿದ್ದಾರೆ. ಆದರೆ ಆರೋಪಿ ಸಿಟ್ಟಿನಲ್ಲಿ ಮೀನಾಳನ್ನು ಕೊಲೆಗೈದಿದ್ದಾನೆ ಎಂದು ಹೇಳಲಾಗುತ್ತಿದೆ.
ಶ್ವಾನದಳ, ವಿಧಿ ವಿಜ್ಞಾನ ತಂಡ ಭೇಟಿ: ಕೊಲೆ ನಡೆದ ಸ್ಥಳಕ್ಕೆ ಶ್ವಾನ ದಳ, ವಿಧಿ ವಿಜ್ಞಾನ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕೊಡಗು ಹೆಚ್ಚುವರಿ ಎಸ್ಪಿ ಸುಂದರ್ ರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳದಿಂದ ಸ್ವಲ್ಪ ದೂರದಲ್ಲಿ ಮಚ್ಚು ಪತ್ತೆಯಾಗಿದ್ದು, ಪೊಲೀಸರು ಆರೋಪಿಗಾಗಿ ತಿವ್ರ ಶೋಧ ನಡೆಸುತ್ತಿದ್ದಾರೆ.