25 ಕ್ಯಾಬಿನ್ ಸಿಬ್ಬಂದಿ ವಜಾ ಆದೇಶ ಹಿಂಪಡೆದ ಏರ್ ಇಂಡಿಯಾ ಎಕ್ಸ್ಪ್ರೆಸ್- ಮುಷ್ಕರ ಅಂತ್ಯ
ನವದೆಹಲಿ: ಕ್ಯಾಬಿನ್ ಸಿಬ್ಬಂದಿ ಎತ್ತಿರುವ ಎಲ್ಲಾ ಸಮಸ್ಯೆಗಳನ್ನು ಪರಿಶೀಲಿಸುವುದಾಗಿ ಏರ್ಲೈನ್ ಭರವಸೆ ನೀಡಿದ ನಂತರ ಏರ್ ಇಂಡಿಯಾ ಎಕ್ಸ್ಪ್ರೆಸ್ ಕ್ಯಾಬಿನ್ ಸಿಬ್ಬಂದಿಯ ಒಂದು ವಿಭಾಗ ಮುಷ್ಕರವನ್ನು ಹಿಂಪಡೆದಿದ್ದು, ಕರ್ತವ್ಯಕ್ಕೆ ಹಾಜರಾಗಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಇದಲ್ಲದೆ, 25 ಕ್ಯಾಬಿನ್ ಸಿಬ್ಬಂದಿಗೆ ನೀಡಲಾದ ಕೆಲಸದಿಂದ ವಜಾ ಪತ್ರಗಳನ್ನು ಹಿಂಪಡೆಯಲು ಏರ್ಲೈನ್ ಒಪ್ಪಿಕೊಂಡಿದೆ ಮತ್ತು ನಿರ್ವಹಣೆಯು ಸೇವಾ ನಿಯಮಗಳ ಪ್ರಕಾರ ಪ್ರಕರಣಗಳನ್ನು ಪರಿಶೀಲಿಸುವುದಾಗಿ ಹೇಳಿದೆ.
ಟಾಟಾ ಗ್ರೂಪ್ ಒಡೆತನದ ವಿಮಾನಯಾನ ಸಂಸ್ಥೆ, ಮಂಗಳವಾರ 200 ಕ್ಕೂ ಹೆಚ್ಚು ಕ್ಯಾಬಿನ್ ಸಿಬ್ಬಂದಿ ಅನಾರೋಗ್ಯದ ನೆಪ ಹೇಳಿ ಸಾಮೂಹಿಕ ರಜೆ ಹಾಕಿದ್ದರು ಮತ್ತು ಕೆಲವು ಕ್ಯಾಬಿನ್ ಸಿಬ್ಬಂದಿ ಮುಷ್ಕರ ನಡೆಸಿದರು. ಪರಿಣಾಮ ಬುಧವಾರ 70 ಕ್ಕೂ ಹೆಚ್ಚು ವಿಮಾನಗಳ ಸಂಚಾರವನ್ನು ರದ್ದುಗೊಳಿಸಲಾಗಿತ್ತು.
ಇಂದು ರಾಷ್ಟ್ರ ರಾಜಧಾನಿಯಲ್ಲಿನ ಮುಖ್ಯ ಕಾರ್ಮಿಕ ಆಯುಕ್ತರ(ಕೇಂದ್ರ) ಕಚೇರಿಯಲ್ಲಿ ಕ್ಯಾಬಿನ್ ಸಿಬ್ಬಂದಿ ಪ್ರತಿನಿಧಿಗಳು ಮತ್ತು ವಿಮಾನಯಾನ ಸಂಸ್ಥೆಯ ಪ್ರತಿನಿಧಿಗಳ ನಡುವಿನ ಸಂಧಾನ ಸಭೆಯಲ್ಲಿ, ಮುಷ್ಕರ ಹಿಂತೆಗೆದುಕೊಳ್ಳುವ ಮತ್ತು ವಜಾ ಆದೇಶ ಹಿಂಪಡೆಯುವ ನಿರ್ಧಾರ ತೆಗೆದುಕೊಳ್ಳಲಾಯಿತು.