SSLC ಫಲಿತಾಂಶ: ಶಾಲಾ ಅಟೆಂಡರ್ ಮಗಳು ರಾಜ್ಯಕ್ಕೆ 3ನೇ ಸ್ಥಾನ
ಕಾರ್ಕಳ, ಮೇ 9: ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಾರ್ಕಳ ತಾಲೂಕಿನ ಗಣಿತನಗರದ ಜ್ಞಾನ ಸುಧಾ ಆಂಗ್ಲ ಮಾಧ್ಯಮ ಶಾಲೆಯ ಸಹನಾ ಎನ್. 623 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾರೆ.
ಶಾಲೆಯ ಮುಖ್ಯೋಪಾಧ್ಯಾಯನಿ ಉಷಾ ರಾವ್, ಸಾಧನೆ ಮಾಡಿದ ಸಹನಾಗೆ ಶುಭ ಹಾರೈಸಿದರು. ಈಕೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಹಿರ್ಗಾನದ ಪ್ರಭಾ ಕುಮಾರಿ, ಹಾಗೂ ಶಂಕರ್ ದಂಪತಿಯ ಏಕೈಕ ಪುತ್ರಿ. ಶಂಕರ್ ಮುಂಡ್ಕೂರು ವಿದ್ಯಾವರ್ಧಕ ಪ್ರೌಢಶಾಲೆಯ ಅಟೆಂಡರ್ ಆಗಿ ಹಾಗೂ ಪ್ರಭಾ ಕಾರ್ಕಳ ಕೋರ್ಟ್‌ನಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಸಹನಾ, 623 ಅಂಕ ಪಡೆದಿದ್ದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ. ಪೋಷಕರು ಶಿಕ್ಷಕರ ಪ್ರೋತ್ಸಾಹದಿಂದ ಈ ಅಂಕ ಪಡೆಯಲು ಸಾಧ್ಯವಾಗಿದೆ. ಶಾಲೆಯಲ್ಲಿ ನಿರಂತರ ಪರೀಕ್ಷೆಗಳನ್ನು ಮಾಡುತ್ತಿದ್ದರು. ಹಳೆ ಪ್ರಶ್ನೆ ಪತ್ರಿಕೆಗಳ ರಿವಿಜನ್ ಮಾಡಿಸುತ್ತಿದ್ದರು. ತಜ್ಞ, ತರಬೇತುದಾರರ ಮೂಲಕ ಕೋಚಿಂಗ್ ಕೊಡಿಸುತ್ತಿದ್ದರು ಎಂದರು.
ನಿರಂತರ ಓದಿಗೆ, ಏಕಾಗ್ರತೆಗೆ ಆದ್ಯತೆ ನೀಡುತ್ತಿದ್ದರು. ನನ್ನ ಜೀವನದಲ್ಲಿ ತಂದೆ ತಾಯಿಯ ಪಾತ್ರ ದೊಡ್ಡದು. ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿ ಗಳಿಗೆ ಮಹತ್ವದ ಘಟ್ಟವಾಗಿದ್ದು, ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಪೋಷಕರು ಮತ್ತು ಶಿಕ್ಷಕರು ಪೂರ್ಣ ಬೆಂಬಲ ನೀಡಬೇಕು. ಮುಂದೆ ಜ್ಞಾನ ಸುಧಾದಲ್ಲಿ ಪಿಸಿಎಂಸಿ ಮಾಡಿ ಎನ್‌ಐಟಿಕೆಯಲ್ಲಿ ಇಂಜಿನಿಯರ್ ಮಾಡುವ ಗುರಿ ಹೊಂದಿದ್ದೇನೆ ಎಂದರು.
‘ಈಕೆ ಕೋಚಿಂಗ್ ಕ್ಲಾಸ್‌ಗೆ ಹೋಗದೆ ನಮ್ಮ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಳು. ಈಕೆಗೆ ಮಾತು ಕಡಿಮೆ ಕೆಲಸ ಜಾಸ್ತಿ. ಯಾವುದೇ ಸಂಶಯ ಇದ್ದರೂ ಆಗಲೇ ಕ್ಲೀಯರ್ ಮಾಡುತ್ತಿದ್ದಳು. ಶಾಲೆಯಿಂದ ಹೋದ ಬಳಿಕ ಮನೆಯಲ್ಲೂ ಆಕೆ ಕಲಿಕೆ ಸಂಬಂಧ ಹಾರ್ಡ್ ವರ್ಕ್ ಮಾಡುತ್ತಿದ್ದಳು’
ಉಷಾ ರಾವ್, ಮುಖ್ಯೋಪಾಧ್ಯಾಯಿನಿ