ಮಲ್ಪೆ: ಷೇರು ಮಾರುಕಟ್ಟೆ ಹೆಸರಿನಲ್ಲಿ 12ಲಕ್ಷ ರೂ. ವಂಚನೆ
ಮಲ್ಪೆ, ಮೇ 9: ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವಂತೆ ಪ್ರೇರೆಪಿಸಿ ಲಕ್ಷಾಂತರ ರೂ. ಮೋಸ ಮಾಡಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕತಾರ್‌ನಲ್ಲಿರುವ ಡೊನೆಟ್ ರೋಶನ್ ಲಸ್ರಾದೋ ಎಂಬವರು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಲು ಮಲ್ಪೆಯಲ್ಲಿರುವ ತಮ್ಮ ಸಹೋದರಿ ಶಾಲಿನಿ ವೈಲೆಟ್ ಫೆರ್ನಾಂಡಿಸ್ ಎಂಬವರ ಖಾತೆಗೆ ಐದು ಲಕ್ಷ ರೂ. ಹಣ ಹಾಕಿದ್ದು, ಆ ಹಣವನ್ನು ಅಭೀಷೆಕ್ ರಂಜನ್ ಎಂಬವರ ಖಾತೆಗೆ ಹಾಕಲು ತಿಳಿಸಿದ್ದರು.
ಅದರಂತೆ ಮೇ 3ರಂದು ತೊಟ್ಟಂ ಬ್ಯಾಂಕಿನಿಂದ ಹಣವನ್ನು ಅಭಿಷೇಕ್ ಖಾತೆಗೆ ಹಾಕಿದ್ದರು. ಅದೇ ರೀತಿ ರೋಶನ್ ಲಾಭಾಂಶ ಪಡೆಯಲು ಷೇರು ಮಾರುಕಟ್ಟೆಯಲ್ಲಿ 11,90,000ರೂ. ಹಣದ ಹೂಡಿಕೆ ಮಾಡಿದ್ದರು. ಆದರೆ ಆರೋಪಿ ಹೂಡಿಕೆ ಮಾಡಿದ ಹಣದ ಲಾಭಾಂಶವನ್ನು ಕೊಡದೇ ರೋಶನ್ ಹಾಗೂ ಶಾಲಿನಿಗೆ ವಂಚನೆ ಮಾಡಿರುವುದಾಗಿ ದೂರಲಾಗಿದೆ.