ಕೊರೋನಾ ಲಸಿಕೆ ಪೂರೈಕೆ, ಸಂಗ್ರಹಣೆ ಪ್ರಕ್ರಿಯೆಗಳ ಬಗ್ಗೆ ಸಲಹೆ ನೀಡಲು ತಜ್ಞರ ಸಮಿತಿ ರಚನೆ: ಡಾ.ಕೆ.ಸುಧಾಕರ್

ಬೆಂಗಳೂರು: ಕೊರೋನಾ ಲಸಿಕೆ ಲಭ್ಯವಾದ ನಂತರ ಪ್ರತಿಯೊಬ್ಬರಿಗೂ ತಲುಪಿಸಲು ಪೂರ್ವಸಿದ್ಧತೆಗಳು ನಡೆಯುತ್ತಿದ್ದು ಸರಬರಾಜು, ಸಂಗ್ರಹಣೆ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ಸಲಹೆ ನೀಡಲು ತಜ್ಞರ ಸಮಿತಿ ರಚಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕೊರೋನಾ ಲಸಿಕೆಯ ಸಂಶೋಧನೆ ಮತ್ತು ಪ್ರಾಯೋಗಿಕ ಪರೀಕ್ಷೆಯಲ್ಲಿ ತೊಡಗಿರುವ ಆಸ್ತ್ರಾ ಜೆನೆಕಾ ಸಂಸ್ಥೆಯ ಪ್ರತಿನಿಧಿಗಳ ಜೊತೆಗಿನ ಸಭೆಯ ನಂತ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಪ್ರಥಮ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ನಂತರ ವಯೋವೃದ್ಧರು ಮತ್ತು ಇತರೆ ಸಹ ಅಸ್ವಸ್ಥತೆಗಳನ್ನು ಹೊಂದಿರುವವರಿಗೆ ಲಸಿಕೆ ನೀಡಲಾಗುವುದು ಎಂದರು.

ರೋಟಾ ವೈರಸ್ ಗೆ ಲಸಿಕೆ ಸಿಗಲು 29 ವರ್ಷ ಬೇಕಾಯ್ತು, ಎಬೋಲಾ ವೈರಸ್ ಗೆ ಲಸಿಕೆ ಕಂಡುಹಿಡಿಯಲು 20 ವರ್ಷ ಕಾಯಬೇಕಾಯಿತು,  ಮಂಪ್ಸ್ ವೈರಸ್ ಗೆ 4 ವರ್ಷದಲ್ಲಿ ಲಸಿಕೆ ಕಂಡುಹಿಡಿದಿದ್ದೇ ಈವರೆಗೂ ನಮಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಸಿಕ್ಕ ಲಸಿಕೆಯಾಗಿದೆ. ಈಗ ಕೊರೊನಾ ವೈರಸ್ ಗೆ 1 ವರ್ಷದೊಳಗೆ ಲಸಿಕೆ ಕಂಡುಹಿಡಿಯುವ ಪ್ರಯತ್ನದಲ್ಲಿದ್ದೇವೆ ಎಂದು ಸಚಿವರು ತಿಳಿಸಿದರು.

ಲಸಿಕೆ ಸಂಶೋಧನೆಯಲ್ಲಿ ತೊಡಗಿರುವ ಇತರೆ ಸಂಸ್ಥೆಗಳಾದ ಸೀರಮ್ ಇನ್ಸ್ಟಿಟ್ಯೂಟ್, ಭಾರತ್ ಬಯೋಟೆಕ್ ಸಂಸ್ಥೆಗಳ ಜೊತೆಗೂ  ಮುಂದಿನ ದಿನಗಳಲ್ಲಿ ಚರ್ಚೆ ನಡೆಸಲಾಗುವುದು. ಲಸಿಕೆ ಕಂಡುಹಿಡಿಯಲು ವಿಶ್ವದಾದ್ಯಂತ ಹಲವಾರು ಪ್ರಯತ್ನಗಳು ನಡೆಯುತ್ತಿದ್ದು ಲಸಿಕೆ ಯಾವಾಗ ಲಭ್ಯವಾಗುತ್ತದೆ ಎಂಬ ಪ್ರಶ್ನೆಗೆ ನಿಖರ ಉತ್ತರ ಯಾರ ಬಳಿಯೂ ಸದ್ಯಕ್ಕಿಲ್ಲ ಎಂದರು.

ಕೊರೋನಾ ವೈರಸ್ ವಿರುದ್ಧದ ಈ ಹೋರಾಟದಲ್ಲಿ ಲಸಿಕೆ ನಮಗೆ ಆಶಾಕಿರಣವಾಗಿದೆ. ವಿಜ್ಞಾನಿಗಳ ಪ್ರಯತ್ನ ಆದಷ್ಟು ಬೇಗ ಫಲ ನೀಡಲಿ ಎಂದು ಆಶಿಸುತ್ತಾ ಲಸಿಕೆ ಸಿಗುವವರೆಗೂ ಮಾಸ್ಕ್ ಧರಿಸಿವುದು, ಪದೇ ಪದೇ ಕೈ ತೊಳೆಯುವುದು ಮತ್ತು ಭೌತಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸೋಣ ಎಂದು ಸಚಿವರು ಟ್ವೀ್ಟ್ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!