ಮಂಗಳೂರಿನಲ್ಲಿ ಇಂದು ಸಂಸದ ಪ್ರಜ್ವಲ್ ರೇವಣ್ಣ ಅರೆಸ್ಟ್?
ಬೆಂಗಳೂರು: ಸರಣಿ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಅಧಿಕಾರಿಗಳ ಮುಂದೆ ಶರಣಾಗಲಿದ್ದಾರೆ ಎಂದು ಜೆಡಿಎಸ್‌ನ ಹಿರಿಯ ನಾಯಕ ಸಿ ಎಸ್ ಪುಟ್ಟರಾಜು ಶನಿವಾರ ಹೇಳಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಭೇಟಿಯ ನಂತರ ಮಾತನಾಡಿದ ಪುಟ್ಟರಾಜು, ಕಾನೂನು ಚರ್ಚೆ ನಡೆಯುತ್ತಿದೆ, ಪ್ರಜ್ವಲ್ ಶರಣಾಗುತ್ತಾರೆ ಎಂದು ಹೇಳಿದರು. ಆದರೆ ಕುಮಾರಸ್ವಾಮಿ ಭೇಟಿ ವೇಳೆ ಪ್ರಜ್ವಲ್ ಪ್ರಕರಣ ಪ್ರಸ್ತಾಪವಾಗಲಿಲ್ಲ ಎಂದು ತಿಳಿಸಿದರು
ಪ್ರಜ್ವಲ್ ತಂದೆ ಹೆಚ್ ಡಿ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ಪಡೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಪುಟ್ಟರಾಜು ಅವರು, ಅವರನ್ನು ಎಸ್ ಐ ಟಿ ಬಂಧಿಸಿಲ್ಲ, ಜಾಮೀನು ಅರ್ಜಿ ತಿರಸ್ಕೃತಗೊಂಡ ನಂತರ, ಎಚ್‌ಡಿ ದೇವೇಗೌಡರ ಆಶೀರ್ವಾದ ಪಡೆದು ರೇವಣ್ಣ ಎಸ್‌ಐಟಿ ಮುಂದೆ ಹಾಜರಾದರು ಎಂದು ಹೇಳಿದರು.
ರೇವಣ್ಣ ಎಸ್‍ಐಟಿ ತನಿಖೆಗೆ ಹಾಜರಾಗಿದ್ದಾರೆ. ಅವರೇ ಮಹಿಳೆಯನ್ನು ಅಪಹರಿಸಿದ್ದರಾ? ಅಥವಾ ಬೇರೆ ಯಾರು ಅಪಹರಣ ಮಾಡಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯಲಿದೆ. ಈ ಬಗ್ಗೆ ಮಹಿಳೆಯ ಮಗ ದೂರು ದಾಖಲಿಸಿದ್ದ. ಇದರ ಪ್ರಕಾರ ತನಿಖೆ ನಡೆಯಲಿದೆ ಎಂದು ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಹೇಳಿದ್ದಾರೆ. ಕಾನೂನು ಏನಿದೆಯೋ ಅದರ ಪ್ರಕಾರ ಅವರು ನಡೆದುಕೊಳ್ಳಲಿದ್ದಾರೆ. ಈ ಬಗ್ಗೆ ಬಿಜೆಪಿ (BJP) ನಾಯಕರು ಹಾಗೂ ಜೆಡಿಎಸ್ (JDS) ನಾಯಕರು ಚರ್ಚೆ ನಡೆಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಇನ್ನೂ ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣ ಇಂದು ಶರಣಾಗ್ತಾರಾ ಎಂಬ ಪ್ರಶ್ನೆ ಎದ್ದಿದೆ. ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ತಂದೆ ಹೆಚ್‌ಡಿ ರೇವಣ್ಣ ಬಂಧನಕ್ಕೆ ಒಳಗಾದ ಬೆನ್ನಲ್ಲೇ ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲು ಎಸ್‌ಐಟಿ ಸಿದ್ಧತೆ ನಡೆಸುತ್ತಿದೆ.
ಇಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಜ್ವಲ್ ಆಗಮಿಸುವ ಸಾಧ್ಯತೆಯಿದೆ. ಸದ್ಯ ಪ್ರಜ್ವಲ್ ಯುಎಇಯಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಲುಕೌಟ್ ನೋಟಿಸ್ ಜಾರಿಯಾದ ಹಿನ್ನೆಲೆಯಲ್ಲಿ ವಿಮಾನದಿಂದ ಇಳಿದ ನಂತರ ವಲಸೆ ಕೇಂದ್ರದ ಬಳಿಯೇ ಬಂಧನವಾಗುವ ಸಾಧ್ಯತೆಯಿದೆ.