‘ಗೋಧೋಳಿ ಮುಹೂರ್ತ’ಕ್ಕಾಗಿ SIT ಅಧಿಕಾರಿಗಳನ್ನೇ ಅರ್ಧ ಗಂಟೆ ಕಾಯಿಸಿದ ಎಚ್.ಡಿ.ರೇವಣ್ಣ!
ಬೆಂಗಳೂರು : ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣಕ್ಕೆ ಸಂಬಂಧಿಸಿದಂತೆ ಮಹಿಳೆ ಅಪಹರಣ ಪ್ರಕರಣದಲ್ಲಿ ಆರೋಪಿಯಾಗಿರುವ ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು ಎಸ್‌ಐಟಿ ಬಂಧಿಸಿದೆ. ಈ ಬಂಧನದ ಸಂದರ್ಭದಲ್ಲಿಯೂ ʼಶುಭ ಮುಹೂರ್ತʼಕ್ಕಾಗಿ ಎಸ್‌ಐಟಿ ಅಧಿಕಾರಿಗಳನ್ನೇ ರೇವಣ್ಣ ಅವರು ಕಾಯಿಸಿದ್ದಾರೆ ಎಂದು ವರದಿಯಾಗಿದೆ.
ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಶಾಸಕ ಎಚ್.ಡಿ.ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದ ಬೆನ್ನಲ್ಲೇ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳ ತಂಡ ಬಂಧಿಸಿದೆ. ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ನಿವಾಸದಿಂದ ರೇವಣ್ಣ ಅವರನ್ನು ವಶಕ್ಕೆ ಪಡೆದು ಅಧಿಕಾರಿಗಳು ನೇರವಾಗಿ ಎಸ್ಐಟಿ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.
ಎಸ್ ಐಟಿ ಅಧಿಕಾರಿಗಳು ಎಚ್.ಡಿ.ದೇವೇಗೌಡ ಮನೆಗೆ ತೆರಳಿದಾಗ ಎಚ್.ಡಿ.ರೇವಣ್ಣ ಮನೆಯಿಂದ ಹೊರಬರಲು ಶುಭ ಗಳಿಗೆಗಾಗಿ ಕಾದು ಕುಳಿತಿದ್ದರು ಎನ್ನಲಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ರೇವಣ್ಣ ಅವರನ್ನು ಬಂಧಿಸಲು ಬಂದ ಅಧಿಕಾರಿಗಳನ್ನು ಸುಮಾರು 25 ನಿಮಿಷ ಎಚ್.ಡಿ ದೇವೇಗೌಡ ಅವರ ಮನೆ ಬಾಗಿಲಲ್ಲಿ ಕಾದಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. ಎಸ್‌ಐಟಿ ಅಧಿಕಾರಿಗಳ ಬಳಿ ಸುಮಾರು 25 ನಿಮಿಷದ ಬಳಿಕ ಹೊರ ಬರುವುದಾಗಿ ಎಚ್.ಡಿ.ರೇವಣ್ಣ ತಿಳಿಸಿದ್ದರು ಎನ್ನಲಾಗಿದೆ.
ಈ ಎಲ್ಲಾ ವಿಧ್ಯಮಾನಗಳ ಬಳಿಕ ಸಂಜೆ 6.50 ಕ್ಕೆ ಎಚ್.ಡಿ ರೇವಣ್ಣ ಮನೆಯಿಂದ ಹೊರಬಂದಿದ್ದು, ಎಸ್‌ಐಟಿ ಅಧಿಕಾರಿಗಳ ತಂಡ ಬಳಿಕ ಅವರನ್ನು ವಶಕ್ಕೆ ಪಡೆದಿದೆ.