ಮಹಿಳೆ ಅಪಹರಣ ಪ್ರಕರಣ: ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಬಂಧನ
ಬೆಂಗಳೂರು: ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಶಾಸಕ ಎಚ್.ಡಿ.ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದ ಬೆನ್ನಲ್ಲೇ ಮಾಜಿ ಸಚಿವ, ಶಾಸಕ ಎಚ್.ಡಿ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳ ತಂಡ ಬಂಧಿಸಿದೆ.
ಅಪಹರಣಕ್ಕೀಡಾಗಿದ್ದ ಎಚ್ ಡಿ ರೇವಣ್ಣ ಮನೆ ಕೆಲಸದಾಕೆ ರಕ್ಷಣೆ; ಪಿಎ ತೋಟದ ಮನೆಯಲ್ಲಿ ಪತ್ತೆ!
ಹುಣಸೂರು: ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಚ್ ಡಿ ರೇವಣ್ಣಗೆ ಸಂಕಷ್ಟ ಎದುರಾಗಿದ್ದು ಅಪಹರಣಕ್ಕೀಡಾಗಿದ್ದ ಮನೆ ಕೆಲಸದಾಕೆಯನ್ನು SIT ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ.
ಏಪ್ರಿಲ್ 29ರಂದು ರೇವಣ್ಣ ಅವರ ಸಂಬಂಧ ಸತೀಶ್ ಬಾಬು ಎಂಬುವರು ಸಂತ್ರಸ್ತ ಮಹಿಳೆಯನ್ನು ಆಕೆಯ ಮನೆಯಿಂದ ಕರೆದೊಯ್ದಿದ್ದರು. ಈ ಸಂಬಂಧ ತನಿಖೆ ತೀವ್ರಗೊಳಿಸಿದ್ದ ಎಸ್ಐಟಿ ಅಧಿಕಾರಿಗಳು ಮೈಸೂರಿನ ಹುಣಸೂರು ತಾಲೂಕಿನ ಕಾಳೇನಹಳ್ಳಿಯಲ್ಲಿ ಸಂತ್ರಸ್ತ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.
ರೇವಣ್ಣರ ಪಿಎ ರಾಜಶೇಖರ ಎಂಬುವರ ತೋಟದ ಮನೆಯಲ್ಲಿದ್ದ ಮಹಿಳೆಯನ್ನು ರಕ್ಷಿಸಿರುವ ಎಸ್ಐಟಿ ಅಧಿಕಾರಿಗಳು ಆಕೆಯನ್ನು ಸುರಕ್ಷಿತವಾಗಿ ಕರೆದೊಯ್ದಿದ್ದಾರೆ.
ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಎಚ್ ಡಿ ರೇವಣ್ಣ 1ನೇ ಆರೋಪಿಯಾಗಿದ್ದಾರೆ. ಇನ್ನು 2ನೇ ಆರೋಪಿಯಾಗಿರುವ ಸತೀಶ್ ಬಾಬುಗೆ ಕೆ.ಆರ್ ನಗರ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ನನ್ನ ತಾಯಿಯನ್ನ ಅಪಹರಿಸಲಾಗಿದೆ ಎಂದು ಆರೋಪಿಸಿ ಶಾಸಕ ಹೆಚ್ ಡಿ ರೇವಣ್ಣ ಮತ್ತು ಸುರೇಶ್ ಬಾಬು ಎಂಬುವವರ ವಿರುದ್ದ ಸಂತ್ರಸ್ತ ಮಹಿಳೆಯ ಪುತ್ರ ಕೆಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಎಫ್ ಐಆರ್ ದಾಖಲಾಗಿತ್ತು.