ಬೈಲೂರು ಪರಶುರಾಮ ಮೂರ್ತಿಯ ಉಳಿದ ಅರ್ಧಭಾಗವೂ ತೆರವು: ಮತ್ತೆ ವಿವಾದ
ಕಾರ್ಕಳ, ಮೇ 4: ಬೈಲೂರು ಉಮಿಕಲ್‌ಗುಡ್ಡದ ಮೇಲೆ ಸ್ಥಾಪಿಸಲಾಗಿರುವ ವಿವಾದಿತ ಕಂಚಿನ ಪರಶುರಾಮ ಮೂರ್ತಿಯ ಉಳಿದ ಅರ್ಧಭಾಗವನ್ನು ಕೂಡ ಇದೀಗ ತೆರವುಗೊಳಿಸುತ್ತಿರುವ ಬಗ್ಗೆ ವರದಿಯಾಗಿದೆ.
ಪರಶುರಾಮನ ಕಂಚಿನ ಮೂರ್ತಿ ಎಂದು ಹೇಳಿ ಮೇಲ್ಭಾಗ ಫೈಬರ್ ಗ್ಲಾಸ್ ನಲ್ಲಿ ರಚಿಸಿ ಸ್ಥಾಪಿಸಿರುವ ಬಗ್ಗೆ ಸಾಕಷ್ಟು ವಿವಾದವಾಗಿತ್ತು. ಬಳಿಕ ರಾತ್ರೋ ರಾತ್ರಿ ಮೂರ್ತಿಯ ಮೇಲ್ಭಾಗ ಫೈಬರ್ ಗ್ಲಾಸ್‌ನ್ನು ತೆಗೆದು ಬೇರೆಡೆಗೆ ಸಾಗಿಸಲಾಗಿತ್ತು. ಉಳಿದ ಭಾಗವನ್ನು ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಲಾಗಿತ್ತು. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಸರಣಿ ಪ್ರತಿಭಟನೆ, ಜಿಲ್ಲಾ ಉಸ್ತುವಾರಿ ಸಚಿವರ ಭೇಟಿ ನೀಡಿದ ಪರಿಣಾಮ ರಾಜ್ಯ ಸರಕಾರ ಈ ಪ್ರಕರಣದ ತನಿಖೆಯನ್ನು ಸಿಓಡಿಗೆ ವಹಿಸಿತ್ತು.
ಪರಶುರಾಮ ಥೀಮ್ ಪಾರ್ಕ್ ಹಗರಣ ಬಗ್ಗೆ ಮುಖ್ಯಮಂತ್ರಿಗಳು ಸಿಓಡಿ ತನಿಖೆಗೆ ಒಪ್ಪಿಸಿದ್ದು, ಅದರಂತೆ ಈ ಕುರಿತು ನಾಗಮೋಹನ್ ದಾಸ್ ವಿಚಾರಣಾ ಆಯೋಗ ತನಿಖೆಯನ್ನು ನಡೆಸುತ್ತಿದೆ.
ಈ ಮಧ್ಯೆ ಮೂರ್ತಿಯ ಉಳಿದ ಭಾಗವನ್ನು ಕೂಡ ತೆರವುಗೊಳಿಸುವ ಕಾರ್ಯ ನಡೆಸಲಾಗುತ್ತಿದೆ ಎಂಬ ಮಾಹಿತಿ ದೊರೆತಿದೆ. ಅದಕ್ಕಾಗಿ ಮೂರ್ತಿ ಸುತ್ತ ಅಟ್ಟಳಿಗೆಯನ್ನು ಹಾಕಲಾಗುತ್ತಿದೆ ಹಾಗೂ ಉಮ್ಮಿಕಲ್ ಬೆಟ್ಟಕ್ಕೆ ಪೊಲೀಸ್ ಪಹರೆ ಯೊಂದಿಗೆ ಸಾರ್ವಜನಿಕರಿಗೆ ಹೋಗಲು ಅನುಮತಿ ನಿರಾಕರಿಸಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇದೀಗ ಪರಶುರಾಮ ಮೂರ್ತಿ ಮತ್ತೊಮ್ಮೆ ರಾಜಕೀಯದ ವಿವಾದದ ಸುಳಿಯಲ್ಲಿ ಸಿಲುಕಿಕೊಂಡಿದೆ.
ಕಾರ್ಕಳದ ಬೈಲೂರಿನ ಉಮಿಕಲ್‌ಬೆಟ್ಟದಲ್ಲಿ ಸ್ಥಾಪಿಸಲಾದ ವಿವಾದಿತ ಪರಶುರಾಮ ಮೂರ್ತಿ ಮತ್ತೆ ಹಲವು ಊಹಾಪೋಹಗಳಿಗೆ ಕಾರಣವಾಗುತ್ತಿದ್ದು, ಮೇ 2ರಿಂದ ಮೂರ್ತಿಯ ಉಳಿದ ಭಾಗವನ್ನು ರಾತ್ರೋ ರಾತ್ರಿ ತೆರವುಗೊಳಿಸುವ ಮೂಲಕ ಸಾಕ್ಷ್ಯನಾಶ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಶೆಟ್ಟಿ ಆರೋಪಿಸಿದ್ದಾರೆ.
ಕಾರ್ಕಳದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಥೀಮ್ ಪಾರ್ಕ್‌ನಲ್ಲಿ ಸ್ಥಾಪಿಸಲಾದ ಮೂರ್ತಿಯನ್ನು ನಕಲಿ ಎಂಬ ಆರೋಪ ಬಂದ ಹಿನ್ನೆಲೆಯಲ್ಲಿ ಅರ್ಧ ಭಾಗವನ್ನು ಈ ಹಿಂದೆಯೇ ತೆರವುಗೊಳಿಸಲಾಗಿತ್ತು. ಬಳಿಕ ಉಳಿದ ಭಾಗವನ್ನು ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಲಾಗಿತ್ತು. ಮೂರ್ತಿಯ ಬಗ್ಗೆ ಉಂಟಾದ ವಿವಾದದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ರಾಜ್ಯ ಸರಕಾರ ಸಿಓಡಿ ತನಿಖೆಗೆ ಆದೇಶಿಸಿತ್ತು ಎಂದರು.
ಇದೀಗ ತನಿಖೆ ನಡೆಯುತ್ತಿರುವ ಮಧ್ಯೆ ಮೂರ್ತಿಯನ್ನು ತೆರವುಗೊಳಿಸುವ ಮೂಲಕ ಉಳಿದ ಸಾಕ್ಷಿಯನ್ನು ಕೂಡ ನಾಶಪಡಿಸುವ ಹುನ್ನಾರ ಮಾಡ ಲಾಗುತ್ತಿದೆ. ನ್ಯಾಯಾಲಯ ನಿರ್ದೇಶನ ನೀಡಿದೆ ಎಂದು ಸುಳ್ಳು ಮಾಹಿತಿ ನೀಡಿ ನಿರ್ಮಿತಿ ಕೇಂದ್ರದ ಮೂಲಕ ಮೂರ್ತಿಯನ್ನು ತೆರವುಗೊಳಿಸುವ ಕಾರ್ಯಾಚರಣೆ ತೆರೆಮರೆಯಲ್ಲಿ ನಡೆಯುತ್ತಿದೆ ಎಂದು ಅವರು ದೂರಿದರು.
ಈ ಹಿಂದೆ ಉಡುಪಿ ಜಿಲ್ಲಾಧಿಕಾರಿಯವರ ನಿರ್ದೇಶನದ ಮೇರೆಗೆ 2022 ಅ.9ರಂದು ಪರಶುರಾಮ ಮೂರ್ತಿಯ ಅರ್ಧ ಭಾಗವನ್ನು ತೆಗೆದುಕೊಂಡು ಹೋಗಿದ್ದು, ಈ ಬಾರಿ ಜಿಲ್ಲಾಧಿಕಾರಿ ಯವರನ್ನು ಸಂಪರ್ಕಿಸದೆ ನೇರವಾಗಿ ಹೈಕೋರ್ಟ್‌ಗೆ ಅರ್ಜಿ ಹಾಕಲಾಗಿದೆ ಎಂದು ಅವರು ಟೀಕಿಸಿದರು. ಸಿಓಡಿ ತನಿಖೆ ನಡೆಯುತ್ತಿರುವ ಸಂದರ್ಭ ಮೂರ್ತಿ ತೆರವು ಕಾರ್ಯಾಚರಣೆ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಸಂಶಯ ಮೂಡಿಸಿದೆ ಎಂದರು
ಪರಶುರಾಮ ನಕಲಿ ಮೂರ್ತಿಯ ಸತ್ಯಾಸತ್ಯತೆ ಪತ್ತೆ ಹಚ್ಚಿ ಆ ಹೆಸರಿನಲ್ಲಿ ಜನರನ್ನು ವಂಚಿಸಿದ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೆ ಅಸಲಿ ಮೂರ್ತಿ ಪ್ರತಿಷ್ಠಾಪನೆಗೆ ಜವಾಬ್ದಾರಿಯುತವಾಗಿ ಕ್ರಮಕೈಗೊಳ್ಳ ಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಕಾರ್ಕಳ ಬ್ಲಾಕ್ ಅಧ್ಯಕ್ಷ ಸದಾಶಿವ ದೇವಾಡಿಗ, ಜಾರ್ಜ್ ಕ್ಯಾಸ್ಟೆಲಿನೊ ಉಪಸ್ಥಿತರಿದ್ದರು.