ರೇವಣ್ಣ ಮನೆಯಲ್ಲಿ ಕೆಲಸಕ್ಕಿದ್ದ ಮಹಿಳೆ ನಾಪತ್ತೆ- ಅಪಹರಣ ಪ್ರಕರಣ ದಾಖಲು!
ಮೈಸೂರು: ಪ್ರಜ್ವಲ್ ರೇವಣ್ಣ ಸೆಕ್ಸ್ ಹಗರಣದಲ್ಲಿ ಸಂಕಷ್ಟ ಎದುರಿಸುತ್ತಿರುವ ಮಾಜಿ ಸಚಿವ ಎಚ್ ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ತನ್ನ ತಾಯಿ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ರೇವಣ್ಣ ವಿರುದ್ದ ಮೈಸೂರಿನಲ್ಲಿ ದೂರು ದಾಖಲಿಸಿದ್ದಾರೆ.
ಜೆಡಿಎಸ್ ಶಾಸಕ ಹೆಚ್ಡಿ ರೇವಣ್ಣಗೆ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಮತ್ತೊಂದು ಸಂಕಷ್ಟ ಎದುರಾಗಿದ್ದು, ವ್ಯಕ್ತಿಯೊಬ್ಬರು ತನ್ನ ತಾಯಿ ನಾಪತ್ತೆಯಾಗಿದ್ದಾರೆ. ಬಿಡುಗಡೆಯಾದ ಅಶ್ಲೀಲ ವಿಡಿಯೊದಲ್ಲಿ ಅವರ ಚಿತ್ರವೂ ಇತ್ತು, ಬಳಿಕ ಅವರು ಕಣ್ಮರೆಯಾಗಿದ್ದಾರೆ ಎಂದು ಮೈಸೂರಿನ ಕೆಆರ್ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ನಾಪತ್ತೆಯಾಗಿರುವ ಮಹಿಳೆಯ ಪುತ್ರ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದಾಗಿದ್ದಾರೆ.
ಅಶ್ಲೀಲ ವಿಡಿಯೋಗಳಲ್ಲಿ ತಾಯಿ ಕೂಡ ಇದ್ದಾರೆ’
‘ಅಶ್ಲೀಲ ವಿಡಿಯೋ ವಿವಾದದಲ್ಲಿ ನನ್ನ ತಾಯಿಯ ಚಿತ್ರವೂ ಇದೆ. ವಿಡಿಯೋಗಳು ಬಹಿರಂಗವಾದ ಬಳಿಕ ತಾಯಿ ದಿಢೀರ್ ನಾಪತ್ತೆಯಾಗಿದ್ದಾರೆ’ ಎಂದು ಸಂತ್ರಸ್ತ ವ್ಯಕ್ತಿ ದೂರಿನಲ್ಲಿ ತಿಳಿಸಿದ್ದಾರೆ. ದೂರಿನ ಅನ್ವಯ ಹೆಚ್ಡಿ ರೇವಣ್ಣ ವಿರುದ್ಧ ಸೆಕ್ಷನ್ 364/A 365 ಹಾಗೂ 34 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ರೇವಣ್ಣರನ್ನು ಆರೋಪಿ ಸಂಖ್ಯೆ 1 ಎಂದೂ ಸತೀಶ್ ಬಾಬು ಎಂಬವರನ್ನು ಆರೋಪಿ ಸಂಖ್ಯೆ 2 ಎಂದೂ ನಮೂದಿಸಲಾಗಿದೆ.
ಈ ಮಧ್ಯೆ, ಮೈಸೂರು ಪೊಲೀಸ್ ಹೆಚ್ಚುವರಿ ಆಯುಕ್ತೆ ಕೆಆರ್ ನಗರ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಮನೆಗೆಲಸಕ್ಕಿದ್ದ ಮಹಿಳೆ
ಹೆಚ್ಡಿ ರೇವಣ್ಣ ವಿರುದ್ಧ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನು ಅಪಹರಿಸಿದ ಆರೋಪ ಹೊರಿಸಲಾಗಿದೆ. ಹೊಳೇನರಸಿಪುರದ ಚೆನ್ನಾಂಬಿಕ ಥಿಯೇಟರ್ ಪಕ್ಕ ಇರುವ ಮನೆಯಲ್ಲಿ ಮಹಿಳೆ ಸುಮಾರು 6 ವರ್ಷ ಕೆಲಸ ಮಾಡಿದ್ದರು. ನಂತರ ಕೆಲಸ ಬಿಟ್ಟು ಬಂದು ನಮ್ಮೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಈಗ ಲೋಕಸಭೆ ಚುನಾವಣೆ ವೇಳೆ ಸತೀಶ್ ಎಂಬುವವರು ಮಹಿಳೆಯನ್ನು ಕರೆದುಕೊಂಡು ಹೋಗಿದ್ದಾರೆ. ಭವಾನಿ ರೇವಣ್ಣ ಅವರು ಕರೆಯುತ್ತಿದ್ದಾರೆ ಎಂದು ಹೇಳಿ ಕರೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.