ಬಿಜೆಪಿ ನಾಯಕಿ ಖುಷ್ಬೂ ಬಂಧನ
ಚೆನ್ನೈ: ವಿಸಿಕೆ ಅಧ್ಯಕ್ಷ ದೋಳ್ ತಿರುಮಾವಳವನ್ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ನಟಿ, ಬಿಜೆಪಿ ನಾಯಕಿ ಖುಷ್ಬೂ ಸುಂದರ್ ಹಾಗೂ ಕೆಲವು ಬಿಜೆಪಿ ಸದಸ್ಯರನ್ನು ತಮಿಳುನಾಡಿನ ಮುಟ್ಟುಕಾಡುದಲ್ಲಿ ಮಂಗಳವಾರ ಬಂಧಿಸಲಾಗಿದೆ.
ವಿಸಿಕೆ ಅಧ್ಯಕ್ಷ ದೋಳ್ ತಿರುಮಾವಳವನ್ ಅವರು ಮನುಸ್ಮೃತಿ ಉಲ್ಲೇಖಿಸಿ ಮಹಿಳೆಯರ ಬಗ್ಗೆ ಆಡಿದ್ದರು ಎನ್ನಲಾದ ಮಾತುಗಳ ವಿರುದ್ಧ ಬಿಜೆಪಿ ಪ್ರತಿಭಟನೆ ಆಯೋಜಿಸಿತ್ತು. ಅದರಲ್ಲಿ ಪಾಲ್ಗೊಳ್ಳಲು ಖುಷ್ಬೂ ಅವರು ಚಿದಂಬರಂಗೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ಅವರನ್ನು ಬಂಧಿಸಲಾಗಿದೆ.
ಚಿದಂಬರಂನಲ್ಲಿ ಪ್ರತಿಭಟನೆ ನಡೆಸಲು ಪೊಲೀಸರು ಸೋಮವಾರ ಅನುಮತಿ ನಿರಾಕರಿಸಿದ್ದರು. ಖುಷ್ಬೂ ಅವರ ಬಂಧನದ ಬೆನ್ನಲ್ಲೇ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆಟಿ ರಾಘವನ್ ಅವರನ್ನು ಮೇಲ್ಮರುವಥುರ್ ಸಮೀಪದ ಅಥುರ್ ಟೋಲ್‌ಗೇಟ್‌ನಲ್ಲಿ ಬಂಧಿಸಿದ್ದಾರೆ. ಮುನ್ನೆಚ್ಚರಿಕೆ ಕ್ರಮದಿಂದ ಅವರನ್ನು ಬಂಧಿಸಲಾಗಿದ್ದು, ಬಳಿಕ ಬಿಡುಗಡೆ ಮಾಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
‘ಬಂಧನಕ್ಕೆ ಒಳಗಾಗಿದ್ದೇನೆ, ಮಹಿಳೆಯರ ಗೌರವಕ್ಕಾಗಿ ನಮ್ಮ ಕೊನೆ ಉಸಿರಿನವರೆಗೂ ಹೋರಾಡುತ್ತೇವೆ. ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ಯಾವಾಗಲೂ ಮಹಿಳೆಯರ ಸುರಕ್ಷತೆ ಬಗ್ಗೆ ಮಾತನಾಡುತ್ತಾರೆ. ನಾವು ಅವರ ಹಾದಿಯಲ್ಲಿ ಸಾಗುತ್ತಿದ್ದೇವೆ. ಕೆಲವು ಕೆಟ್ಟ ವ್ಯಕ್ತಿಗಳ ದೌರ್ಜನ್ಯಕ್ಕೆ ನಾವು ಮಂಡಿಯೂರುವುದಿಲ್ಲ. ಭಾರತ್ ಮಾತಾ ಕಿ ಜೈ’ ಎಂದು ಖುಷ್ಬೂ ಟ್ವೀಟ್ ಮಾಡಿದ್ದಾರೆ.