ಪ್ರಜ್ವಲ್ ರೇವಣ್ಣ ‘ಮಾಸ್ ರೇಪಿಸ್ಟ್’ ಎಂದು ಬಿಜೆಪಿಗೆ ಗೊತ್ತಿತ್ತು-ಆದ್ರೂ ಅವರ ಪರ ಪ್ರಚಾರ ಮಾಡಿದ ಪ್ರಧಾನಿ ಕ್ಷಮೆ ಕೇಳಬೇಕು: ರಾಹುಲ್
ಶಿವಮೊಗ್ಗ: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು 400 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ, ಅವರ ವೀಡಿಯೋಗಳನ್ನು ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಒಬ್ಬ ಮಾಸ್ ರೇಪಿಸ್ಟ್ ಎಂದು ಬಿಜೆಪಿಗೆ ಗೊತ್ತಿತ್ತು. ಆದರೂ ಅವರ ಪರ ಪ್ರಚಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಮಹಿಳೆಯರಲ್ಲಿ ಕ್ಷಮೆಯಾಚಿಸಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆಗ್ರಹಿಸಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಮೋದಿಯನ್ನು ಗುರಿಯಾಗಿಸಿಕೊಂಡು “ಮಾಸ್ ರೇಪಿಸ್ಟ್” ಪರವಾಗಿ ಮತಯಾಚಿಸಿದ್ದಕ್ಕಾಗಿ ಅವರು ದೇಶದ ತಾಯಂದಿರು ಮತ್ತು ಸಹೋದರಿಯರಲ್ಲಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರ ಮೊಮ್ಮಗ ಪ್ರಜ್ವಲ್ ಅವರು ನೂರಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದಾರೆ. ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿದೆ.
33 ವರ್ಷದ ಜೆಡಿಎಸ್ ಸಂಸದ ಭಾಗಿಯಾಗಿದ್ದಾರೆ ಎನ್ನಲಾದ ಹಲವು ಸೆಕ್ಸ್ ವಿಡಿಯೋ ತುಣುಕುಗಳು ಇತ್ತೀಚಿನ ದಿನಗಳಲ್ಲಿ ಹಾಸನದಲ್ಲಿ ಭಾರಿ ವೈಲರ್ ಆಗಿದ್ದವು.
ಪ್ರಜ್ವಲ್ ರೇವಣ್ಣ 400 ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ವಿಡಿಯೋ ಮಾಡಿದ್ದಾರೆ. ಇದು ಲೈಂಗಿಕ ಹಗರಣವಲ್ಲ. ಮಾಸ್ ಅತ್ಯಾಚಾರ ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷರು ಆರೋಪಿಸಿದ್ದಾರೆ.
ನೀವು ಈ ರೇಪಿಸ್ಟ್‌ಗೆ ಮತ ಹಾಕಿದರೆ ಅದು ನನಗೆ ಸಹಾಯ ಮಾಡುತ್ತದೆ ಎಂದು ಅವರು (ಮೋದಿ) ಕರ್ನಾಟಕದ ಜನತೆಗೆ ಹೇಳಿದರು. ಆದರೆ ಪ್ರಧಾನಿ ನಿಮ್ಮ ಮತವನ್ನು ಕೇಳುವಾಗ ಪ್ರಜ್ವಲ್ ಏನು ಮಾಡಿದರು ಎಂಬುದು ಕರ್ನಾಟಕದ ಪ್ರತಿಯೊಬ್ಬ ಮಹಿಳೆಗೆ ತಿಳಿದುಕೊಳ್ಳಬೇಕು ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
ಪ್ರಜ್ವಲ್ ಒಬ್ಬ ಮಾಸ್ ಅತ್ಯಾಚಾರಿ ಎಂದು ಪ್ರತಿಯೊಬ್ಬ ಬಿಜೆಪಿ ನಾಯಕರಿಗೆ ತಿಳಿದಿದ್ದರೂ ಅವರು ಅವರನ್ನು ಬೆಂಬಲಿಸಿದರು ಮತ್ತು ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡರು ಎಂದು ರಾಹುಲ್ ಗಾಂಧಿ ಆರೋಪಿಸಿದರು.
ಪ್ರಧಾನಿ ಮೋದಿ ಪ್ರಜ್ವಲ್ ರೇವಣ್ಣ ಪರ ಮತಯಾಚಿಸುವ ಮೂಲಕ ಭಾರತದ ಪ್ರತಿಯೊಬ್ಬ ಮಹಿಳೆಯನ್ನು ಅವಮಾನಿಸಿದ್ದಾರೆ. ಪ್ರಧಾನಿ, ಗೃಹ ಸಚಿವ ಅಮಿತ್ ಶಾ ಮತ್ತು ಎಲ್ಲಾ ಬಿಜೆಪಿ ನಾಯಕರು ದೇಶದ ಪ್ರತಿಯೊಬ್ಬ ಮಹಿಳೆಯರ ಕ್ಷಮೆಯಾಚಿಸಬೇಕು. ವಿಶ್ವದ ಯಾವುದೇ ನಾಯಕ “ಮಾಸ್ ಅತ್ಯಾಚಾರಿ” ಪರವಾಗಿ ಮತ ಕೇಳುವುದಿಲ್ಲ ಎಂದು ರಾಹುಲ್ ಗಾಂಧಿ ಕಿಡಿಕಾರಿದರು.
ಮಾಸ್ ಅತ್ಯಾಚಾರಿಯೊಬ್ಬನ ಪರವಾಗಿ ಪ್ರಧಾನಿ ಮತ ಯಾಚಿಸಿದ್ದು ವಿಶ್ವದಾದ್ಯಂತ ಸುದ್ದಿಯಾಗಿದೆ. ಇದು ಬಿಜೆಪಿಯ ಸಿದ್ಧಾಂತ. ಅವರು ಮೈತ್ರಿ ಮಾಡಿಕೊಳ್ಳಲು ಮತ್ತು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಾಗಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.