ಮೇ 4: ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನಲ್ಲಿ ಉದ್ಯೋಗ ಮೇಳ

ಉಡುಪಿ, ಮೇ 3(ಉಡುಪಿ ಟೈಮ್ಸ್ ವರದಿ): ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜು, ವಿಜ್ಡಮ್ ಸಂಸ್ಥೆಗಳ ನೆಟ್‌ವರ್ಕ್‌ನ ಸಹಯೋಗದೊಂದಿಗೆ ಉದ್ಯೋಗ ಮೇಳವೊಂದನ್ನು ಮೇ 4ರ ಶನಿವಾರ ಬೆಳಗ್ಗೆ 9 ರಿಂದ ಸಂಜೆ 4:30ರ ವರೆಗೆ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದೆ ಎಂದು ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿನ್ಸೆಂಟ್ ಆಳ್ವ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶವಾದ ಕಲ್ಯಾಣಪುರದಲ್ಲಿ 1967ರಲ್ಲಿ ಪ್ರಾರಂಭಗೊಂಡ ಈ ಕಾಲೇಜು, ಪರಿಸರದ ಬಡ ಹಾಗೂ ಅವಕಾಶ ವಂಚಿತ ಗ್ರಾಮೀಣ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಮೌಲ್ಯಯುತ ಶಿಕ್ಷಣ ನೀಡುತಿದ್ದು, ಇದೀಗ ಅವರಿಗೆ ಉದ್ಯೋಗ ಅವಕಾಶವನ್ನು ಒದಗಿಸಲು ಉದ್ಯೋಗ ಮೇಳವನ್ನು ಆಯೋಜಿಸುವ ಯೋಜನೆ ಹಾಕಿಕೊಂಡಿದೆ ಎಂದರು.

ಈ ಉದ್ಯೋಗ ಮೇಳದಲ್ಲಿ ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಆಸುಪಾಸಿನ ಎಲ್ಲಾ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೂ ಉದ್ಯೋಗ ಹೊಂದುವ ಅವಕಾಶವನ್ನು ಒದಗಿಸುತ್ತದೆ. ಅಂತಿಮ ವರ್ಷದ ಪದವಿಯಲ್ಲಿ ಕಲಿಯುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಹಾಗೂ ಈಗಾಗಲೇ ಪದವಿ ಪಡೆದು ಉದ್ಯೋಗದ ಬೇಟೆಯಲ್ಲಿರುವ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದು ಎಂದರು.

ಬಿಎ, ಬಿಎಸ್ಸಿ, ಬಿಕಾಂ, ಬಿಬಿಎ, ಬಿಸಿಎ ಪದವೀಧರಲ್ಲದೇ, ಮೂಲಭೂತ ವಿಜ್ಞಾನ, ಮಾನವಿಕ, ವಾಣಿಜ್ಯ ಮತ್ತು ನಿರ್ವಹಣೆ, ಇಂಜಿನಿಯರಿಂಗ್, ಡಿಪ್ಲೋಮಾ ವಿದ್ಯಾರ್ಥಿಗಳು ನೊಂದಣಿಯನ್ನು ಮಾಡಿಕೊಳ್ಳಬಹುದಾಗಿದೆ. ಎಸೆಸೆಲ್ಸಿ ಬಳಿಕ ಡಿಪ್ಲೋಮ, ಐಟಿಐ ಕಲಿತ, ಪದವಿ ಪೂರ್ವ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೂ ಅವಕಾಶಗಳಿವೆ.

ಎಂಟು ಐಟಿ ಕಂಪೆನಿಗಳು, ಎಂಟು ಹಾಸ್ಪಿಟಾಲಿಟಿ ಕಂಪೆನಿ, ಐದು ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ಏವಿಯೇಷನ್, ಗೇಮಿಂಗ್, ಫಾರ್ಮಾ, ನರ್ಸಿಂಗ್, ಐಟಿ ಸಾಫ್ಟ್‌ವೇರ್, ಅಟೋಮೊಬೈಲ್, ಜವಳಿ, ಮೊಬೈಲ್ ವಿತರಣೆ ಸೇರಿದಂತೆ 45 ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುವುದನ್ನು ಖಾತ್ರಿ ಪಡಿಸಿವೆ ಎಂದು ಡಾ.ವಿನ್ಸೆಂಟ್ ಆಳ್ವ ತಿಳಿಸಿದರು.

ಸುಮಾರು 1000 ಮಂದಿ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇದ್ದು, ಈಗಾಗಲೇ 625 ಮಂದಿ ಹೆಸರು ನೊಂದಾಯಿಸಿಕೊಂಡಿದ್ದಾರೆ. ಇಲ್ಲಿ 500ಕ್ಕೂ ಅಧಿಕ ಉದ್ಯೋಗಗಳು ಲಭ್ಯವಿ ರುವ ನಿರೀಕ್ಷೆ ಇದೆ ಎಂದೂ ಡಾ.ಆಳ್ವ ವಿವರಿಸಿದರು. ಆಸಕ್ತರು ಶಿಬಿರದಲ್ಲಿ ಭಾಗವಹಿಸುವುದಕ್ಕಾಗಿ ಹೆಸರು ನೊಂದಾಯಿಸಲು ದೂರವಾಣಿ ಸಂಖ್ಯೆ: 8970098989(ಕಾರ್ತಿಕ್ ನಾಯಕ್) ಇವರನ್ನು ಸಂಪರ್ಕಿಸಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಉಪಪ್ರಾಂಶುಪಾಲೆ ಪ್ರೊ.ಸೋಫಿಯಾ ಡಯಾಸ್, ಡಾ.ಜಯರಾಮ ಶೆಟ್ಟಿಗಾರ್, ಕಾರ್ತಿಕ್ ನಾಯಕ್, ರವಿನಂದನ್ ಭಟ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!