ದುಬೈನಲ್ಲಿ ಅಸ್ಥಿರ ಹವಾಮಾನ ಪರಿಸ್ಥಿತಿ: ನಾಗರಿಕರಿಗೆ ಎಚ್ಚರಿಕೆ
ದುಬೈ: ದುಬೈನಲ್ಲಿ ಅಸ್ಥಿರ ಹವಾಮಾನ ಪರಿಸ್ಥಿತಿ ಸೃಷ್ಟಿಯಾಗಿರುವ ಬೆನ್ನಲ್ಲೇ ದುಬೈ ಪೊಲೀಸ್ ಸಾರ್ವಜನಿಕ ಸುರಕ್ಷಾ ಎಚ್ಚರಿಕೆ ನೀಡಿದ್ದು, ಬೀಚ್ ಗಳಿಗೆ ಹೋಗದಂತೆ, ಸಮುದ್ರಯಾನ ಮಾಡದಂತೆ, ಕಣಿವೆ ಪ್ರದೇಶಗಳಿಗೆ ಸಂಚರಿಸದಂತೆ ಸಲಹೆ ಮಾಡಿದೆ. ಅಂತೆಯೇ ಧಾರಾಕಾರ ಮಳೆಯ ಸಂದರ್ಭದಲ್ಲಿ ತಗ್ಗು ಪ್ರದೇಶಗಳಿಗೆ ಭೇಟಿ ನೀಡದಂತೆ ಹಾಗೂ ವಾಹನಗಳನ್ನು ಹೆಚ್ಚಿನ ಎಚ್ಚರಿಕೆಯಿಂದ ಚಾಲನೆ ಮಾಡುವಂತೆ ಸೂಚಿಸಿದೆ.
ಕಾಲಕಾಲಕ್ಕೆ ನೀಡಲಾಗುವ ಅಧಿಕೃತ ಸೂಚನೆಗಳನ್ನು ಪಾಲಿಸುವಂತೆ ಕೋರಲಾಗಿದ್ದು, ಅರಬ್ ಎಮಿರೇಟ್ಸ್ ಮುಂದಿನ ಕೆಲ ಗಂಟೆಗಳ ಅವಧಿಯಲ್ಲಿ ಹವಾಮಾನ ವ್ಯತ್ಯಯಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇದೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ.
ಯುಎಇಯಲ್ಲಿ ಬುಧವಾರ ಸಂಜೆಯಿಂದ ಎರಡು ದಿನಗಳ ಕಾಲ ಸಾಧಾರಣದಿಂದ ಭಾರೀ ಮಳೆಯಾಗುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ. ಬಹುತೇಕ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ಕೇಳಿಕೊಂಡಿವೆ. ಹಲವು ಶಾಲೆಗಳು ಕೂಡಾ ಶುಕ್ರವಾರದ ವರೆಗೆ ಆನ್ ಲೈನ್ ಕಲಿಕೆಗೆ ಮನವಿ ಮಾಡಿಕೊಂಡಿವೆ. ಇಡೀ ದೇಶ ಭಾರಿ ಮಳೆ ಪರಿಸ್ಥಿತಿ ಎದುರಿಸಲು ಸಜ್ಜಾಗಿದೆ ಎಂದು ದ ನ್ಯಾಷನಲ್ ವರದಿ ವಿವರಿಸಿದೆ.
ಪೋರ್ಟ್, ಕಸ್ಟಮ್ಸ್ & ಫ್ರೀಝೋನ್ ಕಾರ್ಪೊರೇಷನ್ (ಪಿಸಿಎಫ್ಸಿ) ಹೇಳಿಕೆ ನೀಡಿ, ಮರದ ದಿಮ್ಮಿಗಳನ್ನು ತರುವ ಮತ್ತು ಬೇರೆಡೆಗೆ ಒಯ್ಯುವ ಮನವಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಸ್ಪಷ್ಟಪಡಿಸಿದೆ.
ದುಬೈ ವಿಮಾನ ನಿಲ್ದಾಣ ಕೂಡಾ ಪ್ರಯಾಣಿಕರಿಗೆ ಪ್ರತಿಕೂಲ ಹವಾಮಾನದ ಬಗ್ಗೆ ಮುನ್ಸೂಚನೆ ನೀಡಿದೆ. ಮುಂಜಾನೆ ಬೇಗ ಪ್ರಯಾಣ ಆರಂಭಿಸುವಂತೆ ಮತ್ತು ವಿಮಾನ ನಿಲ್ದಾಣಗಳನ್ನು ತಲುಪಲು ಹೆಚ್ಚಿನ ಸಮಯವನ್ನು ಇಟ್ಟುಕೊಳ್ಳುವಂತೆ ಕೇಳಿಕೊಂಡಿದೆ.