ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಕಮಿಷನ್ ಎಂದರ್ಥ: ಜೆ.ಪಿ.ನಡ್ಡಾ

ಹಾವೇರಿ: ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ ಮತ್ತು ಕಮಿಷನ್ ಎಂದರ್ಥ ಎಂದು ಲೇವಡಿ ಮಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಕುಟುಂಬ ರಾಜಕಾರಣ ಮತ್ತು ಭ್ರಷ್ಟರನ್ನು ರಕ್ಷಿಸಲು INDIA ಮೈತ್ರಿಕೂಟ ಮಾಡಿಕೊಳ್ಳಲಾಗಿದೆ ಎಂದು ಟೀಕಿಸಿದ್ದಾರೆ.

ಬ್ಯಾಡಗಿಯಲ್ಲಿಂದು ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ರೋಡ್ ಶೋ ಮುಗಿದ ನಂತರ ಜನರನ್ನುದ್ದೇಶಿಸಿ ಮಾತನಾಡಿದ ಜೆ. ಪಿ. ನಡ್ಡಾ, INDIA ಮೈತ್ರಿಕೂಟಕ್ಕೆ ಪ್ರಧಾನಿ ಅಭ್ಯರ್ಥಿ ಇದ್ದಾರೆಯೇ ಎಂದು ಪ್ರಶ್ನಿಸಿದರು. “ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಕಾಂಗ್ರೆಸ್ ಎಂದರೆ ಕಮಿಷನ್, INDIA ಮೈತ್ರಿ ಎಂದರೇನು ಎಂದು ಪ್ರಶ್ನಿಸಿದರು. ಒಂದು ವೇಳೆ ಬಿಜೆಪಿ ಅಧಿಕಾರಕ್ಕೆ ಬಂದರೆ ನಮ್ಮ ನಾಯಕ ಮೋದಿ ಪ್ರಧಾನಿಯಾಗುತ್ತಾರೆ ಎಂದು ನಾವು ಹೇಳುತ್ತೇವೆ. ಒಂದು ವೇಳೆ ವಿರೋಧ ಪಕ್ಷಗಳ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಐದು ವರ್ಷಗಳಲ್ಲಿ ಐದು ಪ್ರಧಾನಿಗಳು ಇರಲಿದ್ದಾರೆ ಎಂದು ಅವರು ಹೇಳುತ್ತಾರೆ ಎಂದರು.

ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿ ಯಾರು? ಅವರಿಗೆ ಕೋವಿಡ್ ನಂತಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸಿದ ನರೇಂದ್ರ ಮೋದಿ ಅವರಂತಹ ನಾಯಕರಿದ್ದಾರೆಯೇ? ಎಂದು ಪ್ರಶ್ನಿಸಿದ ಜೆಪಿ ನಡ್ಡಾ, ವಿಪಕ್ಷಗಳ ಮೈತ್ರಿಕೂಟ ಕೇವಲ ಅಧಿಕಾರಕ್ಕಾಗಿ, ಅವರು ನಿಮ್ಮೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಕುಟುಂಬ ರಾಜಕಾರಣ ಮತ್ತು ಭ್ರಷ್ಟಾಚಾರ ರಕ್ಷಿಸುವ ಕಾರಣದಿಂದಾಗಿ ಅವರು ಮೈತ್ರಿಯಾಗಿದ್ದಾರೆ ಹೊರತು ಅವರಿಗೆ ಬೇರೆ ಯಾವುದೇ ಕೆಲಸವಿಲ್ಲ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಕ್ಷಗಳ ವಿವಿಧ “ಹಗರಣಗಳನ್ನು” ಎತ್ತಿ ಹಿಡಿದ ನಡ್ಡಾ, ಅವರೆಲ್ಲರೂ ಭ್ರಷ್ಟರು. ಡಿ ಕೆ ಶಿವಕುಮಾರ್ ಹಗರಣದಲ್ಲಿ ಭಾಗಿಯಾಗಿದ್ದಾರೋ ಅಥವಾ ಇಲ್ಲವೇ? ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪಿ. ಚಿದಂಬರಂ, ಲಾಲು ಪ್ರಸಾದ್ ಯಾದವ್, ಡಿ ಕೆ ಶಿವಕುಮಾರ್ ಮತ್ತಿತರರು ಜಾಮೀನಿನ ಮೇಲೆ ಹೊರಗಿದ್ದಾರೆಯೇ ಅಥವಾ ಇಲ್ಲವೇ? ಎಂದು ಜನರನ್ನು ಕೇಳಿದರು. ಅಲ್ಲದೇ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಜೈಲಿನಲ್ಲಿರುವ ವಿವಿಧ ನಾಯಕರ ಹೆಸರನ್ನು ಉಲ್ಲೇಖಿಸಿ ಟೀಕಾ ಪ್ರಹಾರ ನಡೆಸಿದರು.

ಇದಕ್ಕೂ ಮುನ್ನಾ ವಿಶೇಷವಾಗಿ ವಿನ್ಯಾಸಗೊಳಿಸಿದ ವಾಹನದಲ್ಲಿ ರೋಡ್ ಶೋ ನಡೆಸಿದ ಜೆ.ಪಿ. ನಡ್ಡಾ ಅವರನ್ನು ರಸ್ತೆಯ ಇಕ್ಕೆಲಗಳಲ್ಲಿ ಮತ್ತು ಕಟ್ಟಡಗಳ ಮೇಲೆ ನೆರೆದಿದ್ದ ಜನರು ಸ್ವಾಗತಿಸಿದರು. ಅವರಲ್ಲಿ ಹಲವರು ‘ಮೋದಿ, ಮೋದಿ’, ‘ಭಾರತ್ ಮಾತಾ ಕಿ ಜೈ’ ಘೋಷಣೆಗಳನ್ನು ಕೂಗುತ್ತಿರುವುದು ಕಂಡುಬಂದಿತು. , ಜೋರಾದ ಹರ್ಷೋದ್ಗಾರಗಳು ಮತ್ತು ಡ್ರಮ್ ಬೀಟ್ ಶಬ್ದಗಳ ನಡುವೆ, ಹಲವಾರು ಸ್ಥಳಗಳಲ್ಲಿ ಹಬ್ಬದ ವಾತಾವರಣ ಕಾಣಿಸಿಕೊಂಡಿತು. ರೋಡ್ ಶೋನಲ್ಲಿ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಆರ್. ಅಶೋಕ್ ಮತ್ತಿತರರು ಉಪಸ್ಥಿತರಿದ್ದರು. ನಂತರ ಕಾಗಿನೆಲೆ ಕನಕ ಗುರು ಪೀಠಕ್ಕೆ ಭೇಟಿ ನೀಡಿ ನಿರಂಜನಾನಂದ ಪುರಿ ಸ್ವಾಮೀಜಿ ಅವರನ್ನು ಭೇಟಿ ಮಾಡಿದರು.

Leave a Reply

Your email address will not be published. Required fields are marked *

error: Content is protected !!