ಮಣಿಪಾಲ ಕೆಎಂಸಿ ಆಸ್ಪತ್ರೆಯ ಡಾ. ರಾಮದಾಸ್ ಪೈ ಬ್ಲಾಕ್ ಉದ್ಘಾಟನೆ
ಉಡುಪಿ: ಡಾ.ಟಿ.ಎಂ.ಎ.ಪೈ ಅವರ 126ನೇ ಜನ್ಮ ದಿನಾಚರಣೆ ಸಂದರ್ಭದಲ್ಲಿ ಅವರು 1961ರಲ್ಲಿ ನಿರ್ಮಿಸಿದ ಕಸ್ತೂರ್ಬಾ ಆಸ್ಪತ್ರೆಗೆ ನೂತನವಾಗಿ ನಿರ್ಮಿಸಲಾದ 161 ಹಾಸಿಗೆಗಳ ಡಾ.ರಾಮದಾಸ ಎಂ.ಪೈ ಬ್ಲಾಕ್‌ನ್ನು ಮಾಹೆ ಟ್ರಸ್ಟಿ ವಸಂತಿ ಆರ್.ಪೈ ಅವರು ಇಂದು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಟ್ರಸ್ಟ್‌ನ ಅಧ್ಯಕ್ಷ ಹಾಗೂ ಎಂಇಎಂಜಿ ಮುಖ್ಯಸ್ಥ ಡಾ.ರಂಜನ್ ಆರ್. ಪೈ, ಮಣಿಪಾಲ ಮಾಹೆ ಸಹ ಕುಲಾಧಿಪತಿ ಡಾ.ಎಚ್. ಎಸ್.ಬಲ್ಲಾಳ್, ಮಣಿಪಾಲ್ ಹೆಲ್ತ್ ಎಂಟರ್ ಪ್ರೈಸಸ್‌ನ ಮುಖ್ಯಸ್ಥ ಡಾ.ಎಚ್. ಸುದರ್ಶನ್ ಬಲ್ಲಾಳ್, ಮಾಹೆ ಕುಲಪತಿ ಲೆ. ಜ.(ಡಾ) ಎಂ.ಡಿ. ವೆಂಕಟೇಶ್, ಸಹ ಕುಲಪತಿ (ಆರೋಗ್ಯ ವಿಜ್ಞಾನ) ಡಾ.ಶರತ್‌ಕುಮಾರ್ ರಾವ್, ಕುಲಸಚಿವ ಡಾ.ಗಿರಿಧರ ಕಿಣಿ, ಟಿ.ಅಶೋಕ್ ಪೈ, ಯು.ಸತೀಶ್ ಪೈ, ಡಾ.ಕೆ.ವಿ. ಕಾಮತ್, ನಾಡೋಜ ಡಾ.ಜಿ. ಶಂಕರ್, ಡಾ.ನಾರಾಯಣ ಸಭಾಹಿತ್, ಸಿಜಿ ಮುತ್ತಣ್ಣ, ಡಾ.ರವಿರಾಜ್, ಡಾ.ಪದ್ಮರಾಜ್ ಹೆಗ್ಡೆ, ಡಾ.ಆನಂದ್ ವೇಣುಗೋಪಾಲ್, ಡಾ. ಅವಿನಾಶ್ ಶೆಟ್ಟಿ, ಡಾ.ಶಿರನ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ತನ್ನ ಆವರಣದಲ್ಲಿ ಹೊಸದಾಗಿ ನಿರ್ಮಿಸಿದ ಡಾ.ರಾಮದಾಸ್ ಎಂ ಪೈ ಬ್ಲಾಕ್ ಮೂಲಕ ಅತ್ಯಾಧುನಿಕ ಸೌಲಭ್ಯ ಮತ್ತು ಸೇವೆಯೊಂದಿಗೆ ರೋಗಿಗಳಿಗೆ ವೈಯಕಿಕ ಮತ್ತು ತ್ವರಿತವಾದ ಆರೈಕೆಯನ್ನು ನೀಡುವ ಗುರಿಯನ್ನು ಹೊಂದಿದೆ.
ಇದರಲ್ಲಿ 10 ಹೊರರೋಗಿ ಸಮಾಲೋಚನೆ ಕೊಠಡಿಗಳು, 34 ಡಬಲ್ ಆಕ್ಯುಪೆನ್ಸಿ ಕೊಠಡಿಗಳು, 75 ಖಾಸಗಿ ಕೊಠಡಿಗಳು, 4 ಪ್ರಮುಖ ಸುಧಾರಿತ ಅತ್ಯಾಧುನಿಕ ಆಪರೇಷನ್ ಥಿಯೇಟರ್‌ಗಳು, 4 ಪ್ರೀಮಿಯರ್ ಸೂಟ್ ರೂಮ್ ಗಳೊಂದಿಗೆ 4 ಶಸ್ತ್ರಚಿಕಿತ್ಸಾ ಪೂರ್ವ ಹಾಸಿಗೆಗಳು, 4 ಶಸ್ತ್ರ ಚಿಕಿತ್ಸಾ ನಂತರದ ಕೊಠಡಿಗಳು, 14 ತೀವ್ರ ನಿಗಾ ಘಟಕ ಹಾಸಿಗೆಗಳು, 16 ಹಾಸಿಗೆಗಳ ದಿನದ ಆರೈಕೆ ಘಟಕ ಸೇರಿದಂತೆ ಈ ಬ್ಲಾಕ್ 161 ಹಾಸಿಗೆಗಳನ್ನು ಹೊಂದಿದೆ. ಈ ಮೂಲಕ ಕೆಎಂಸಿ ಮಣಿಪಾಲ 11 ಬ್ಲಾಕ್‌ಗಳ 2032 ಹಾಸಿಗೆಗಳನ್ನೊಳಗೊಂಡ ಬೃಹತ್ ಆಸ್ಪತ್ರೆಯಾಗಿದೆ ಎಂದು ಕೆಎಂಸಿಯ ವೈದ್ಯಕೀಯ ಅಧೀಕ್ಷಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಬ್ಲಾಕ್‌ನಲ್ಲಿ ರೋಗಿಗಳು ಮತ್ತು ಅವರ ಸಹಚರರಿಗೆ ಉತ್ತಮ ಮತ್ತು ಉನ್ನತೀಕರಿಸಿದ ಪ್ರೀಮಿಯಂ ಸೇವೆ ಒದಗಿಸಲಾ ಗುತ್ತದೆ.ಇಲ್ಲಿ ರಕ್ತದ ಮಾದರಿ ಸಂಗ್ರಹಣೆ, ರೋಗನಿರ್ಣಯ ಮತ್ತು ಡೇ ಕೇರ್ ಕಾರ್ಯವಿಧಾನ ಗಳನ್ನು ಮಾಡಲಾಗುತ್ತದೆ. ವಿದೇಶಿ ರೋಗಿಗಳಿಗೆ ಒಂದೇ ಕಡೆ ವೈದ್ಯಕೀಯ ಮತ್ತು ಆಡಳಿತಾತ್ಮಕ ಸೌಲಭ್ಯಗಳನ್ನು ಪಡೆಯಲು, ಅಂತಾರಾಷ್ಟ್ರೀಯ ರೋಗಿಗಳ ಲೌಂಜ್‌ನೊಂದಿಗೆ ಅವರಿಗೆ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಈ ಹೊಸ ಬ್ಲಾಕ್ ಹೊಂದಿದೆ ಎಂದು ಡಾ.ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.