ಉಡುಪಿ: “ಮಹಾ” ಸ್ಪೋಟಗೊಂಡ ಸೋಂಕು, ಒಂದೇ ದಿನ 73 ಪಾಸಿಟಿವ್!
ಉಡುಪಿ: ಜಿಲ್ಲೆಗೆ ಮುಂಬೈ ಪ್ರಯಾಣಿಕರ ಕಂಟಕ ಮುಂದುವರಿದು, ಸೋಮವಾರ ಕೊರೋನಾ ಸೋಂಕಿತರ ಪಟ್ಟಿ “ಮಹಾ” ಸ್ಪೋಟಗೊಂಡು ಉಡುಪಿ ಜಿಲ್ಲೆ ಕರೋನಾ ಸೋಂಕಿನಲ್ಲಿ ರಾಜ್ಯದಲ್ಲಿ ಅಗ್ರಗಣ್ಯದ ಪಟ್ಟಿಗೆ ಸೇರ್ಪಡೆಯಾಗುವುದು ಖಚಿತವಾಗುತ್ತಿದೆ. ಮೊದಲು ಗ್ರೀನ್ ಝೋನ್ ಪಟ್ಟಿಯಲ್ಲಿ ಸ್ಥಾನ ಕಾಯ್ದುಕೊಂಡ ಉಡುಪಿ, ಮುಂಬೈ ಸೋಂಕಿತರು ಜಿಲ್ಲೆಗೆ ಆಗಮಿಸುತ್ತಿದ್ದಂತೆ ಅದು ದಿನಗಳದಂತೆ ರಣಸ್ಪೋಟಗೊಳ್ಳಲು ಪ್ರಾರಂಭವಾಗಿತ್ತು.
ಇಂದಿನ 73 ಪಾಸಿಟಿವ್ ನಲ್ಲಿ ಮುಂಬೈ 61, ದುಬೈ 3, ಜಿಲ್ಲೆಯ 4 ಪೊಲೀಸರಿಗೆ ಸೋಂಕು ದೃಢಪಟ್ಟಿದೆ, ಉಳಿದ ಐವರ ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲವೆಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಮೇ. 31 ರವರೆಗೆ 187 ಸೋಂಕಿತರು ಇದ್ದ ಜಿಲ್ಲೆಯಲ್ಲಿ 64 ಮಂದಿ ಗುಣಮುಖಗೊಂಡು ಮನೆ ಸೇರಿದ್ದಾರೆ.
ಆದರೆ ಇಂದಿನ 73 ಪಾಸಿಟಿವ್ ಸಂಖ್ಯೆ ನೋಡಿ ಜಿಲ್ಲೆಯ ಜನತೆ ಬೆಚ್ಚಿ ಬೀಳುವಂತಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 260ಕ್ಕೆ ಏರಿಕೆ ಆಗಿದೆ. ಇದರಲ್ಲಿ 64 ಮಂದಿ ಗುಣಮುಖಗೊಂಡಿದ್ದಾರೆ.
ಇಂದು ರಾಜ್ಯದಲ್ಲಿ 110 ಜನರು ಕೊರೋನಾದಿಂದ ಗುಣಮುಖರಾಗಿದ್ದಾರೆ. ಓರ್ವ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 55ಕ್ಕೇರಿಕೆಯಾಗಿದ್ದು, 2026 ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರು ನಗರ ನಿವಾಸಿಯಾಗಿದ್ದ 90 ವರ್ಷದ ವೃದ್ಧರೊಬ್ಬರು ಸೋಮವಾರ ಸೋಂಕಿನಿಂದ ಮೃತಪಟ್ಟಿದ್ದಾರೆ. ಅವರು ಬಹು ಅಂಗಾಂಘ ವೈಫಲ್ಯದಿಂದ ಬಳಲುತ್ತಿದ್ದರು.
187 ಪ್ರಕರಣಗಳ ಪೈಕಿ 117 ಮಂದಿ ಅಂತಾರಾಜ್ಯ ಮತ್ತು 3 ಅಂತಾರಾಷ್ಟ್ರೀಯ ಪ್ರಕರಣಗಳು ವರದಿಯಾಗಿವೆ.
ಬೆಂಗಳೂರು ನಗರದಲ್ಲಿ 28, ಕಲಬುರಗಿಯಲ್ಲಿ 24, ಮಂಡ್ಯದಲ್ಲಿ 15, ಉಡುಪಿಯಲ್ಲಿ 73, ಹಾಸನದಲ್ಲಿ 16, ಬೀದರ್ ನಲ್ಲಿ 2, ಚಿಕ್ಕಬಳ್ಳಾಪುರದಲ್ಲಿ 5, ದಕ್ಷಿಣ ಕನ್ನಡದಲ್ಲಿ 4, ವಿಜಯಪುರದಲ್ಲಿ 1, ಬಾಗಲಕೋಟೆಯಲ್ಲಿ 2, ಬಳ್ಳಾರಿಯಲ್ಲಿ 3, ಶಿವಮೊಗ್ಗದಲ್ಲಿ 9, ಧಾರವಾಡದಲ್ಲಿ 2, ಕೋಲಾರದಲ್ಲಿ 1, ಹಾವೇರಿಯಲ್ಲಿ 1, ರಾಮನಗರದಲ್ಲಿ 1 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ