ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ: ಬಿಜೆಪಿ ನಾಯಕರ ವಿರುದ್ಧವೇ ಆರೋಪ ಮಾಡಿದ ಎಚ್.ಡಿ.ಕೆ
ಹಾಸನ: ಹಾಸನದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ಮಹತ್ವದ ತಿರುವು ಪಡೆದುಕೊಂಡಿದೆ. ಈ ಪ್ರಕರಣದ ಹಿಂದೆ ಬಿಜೆಪಿ ನಾಯಕನೊಬ್ಬನ ಕೈವಾಡ ಇದೆ ಎಂದು ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ANI ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಕುಮಾರಸ್ವಾಮಿ, “ಹಾಸನದಲ್ಲಿ ಗೆಲುವು ಅಸಾಧ್ಯ ಎಂದು ತಿಳಿದ ಬಳಿಕ ಬಿಜೆಪಿಯ ಒಬ್ಬ ನಾಯಕನ ಸಹಿತ ವಿರೋಧ ಪಕ್ಷದ ನಾಯಕರು ಪೆನ್ ಡ್ರೈವ್ ಅನ್ನು ಹಂಚಿದ್ದಾರೆ” ಎಂದು ಆರೋಪಿಸಿದ್ದಾರೆ.
“ದೇವೇಗೌಡ ಅವರ ಸಹಿತ ನಮ್ಮ ಕುಟುಂಬದ ಮಾನಹಾನಿಗೆ ಯತ್ನ ಮಾಡಿದ್ದಾರೆ. ನಮ್ಮ ಅಭಿಮಾನಕ್ಕೆ ಚ್ಯುತಿಯುಂಟು ಮಾಡುವ ಉದ್ದೇಶದಿಂದ ಸರ್ಕಾರದ ಅಧಿಕಾರವನ್ನು ದುರುಪಯೋಗ ಮಾಡಿದ್ದಾರೆ. ಇದರ ಹಿಂದೆ ಒಬ್ಬ ಸಚಿವ, ಅದರಲ್ಲೂ ಹಿರಿಯ ಸಚಿವರೊಬ್ಬರು ಇದ್ದಾರೆ. ಹಾಸನದ ಕೆಲವು ಬಿಜೆಪಿ ನಾಯಕರೂ ಇದ್ದಾರೆ” ಎಂದು ರಾಷ್ಟೀಯ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ದೂರಿದ್ದಾರೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಎ.26ರಂದು 14 ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ಇದೀಗ ಪ್ರಜ್ವಲ್ ಅವರ ಪೆನ್ ಡ್ರೈವ್ ಪ್ರಕರಣ ಈಗ ದೇಶಾದ್ಯಂತ ಸುದ್ದಿಯಾಗುತ್ತಿರುವ ಮಧ್ಯೆ ಕುಮಾರಸ್ವಾಮಿಯವರು ನೀಡಿರುವ ಈ ಹೇಳಿಕೆಯಿಂದ ಬಿಜೆಪಿ ಜೊತೆಗಿನ ಮೈತ್ರಿಯಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.