ಉಡುಪಿ: ನ್ಯಾಯಾಧೀಶರುಗಳಿಗೆ ಬೀಳ್ಕೊಡುಗೆ
ಉಡುಪಿ: ಜಿಲ್ಲಾ ನ್ಯಾಯಾಲಯದಿಂದ ವರ್ಗಾವಣೆಗೊಳ್ಳುತ್ತಿರುವ ನ್ಯಾಯಾಧೀಶರುಗಳಿಗೆ ಸೋಮವಾರ ನ್ಯಾಯಾಲಯದ ಆವರಣದಲ್ಲಿ ಉಡುಪಿ ವಕೀಲರ ಸಂಘವು ಬೀಳ್ಕೊಡುಗೆಯನ್ನು ನೀಡಿತು.
ಈ ಸಂದರ್ಭದಲ್ಲಿ ವರ್ಗಾವಣೆಗೊಳ್ಳುತ್ತಿರುವ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ್ ಶಿವಪ್ಪ ಮಾತನಾಡಿ, ನ್ಯಾಯಾಧೀಶರು ಮತ್ತು ವಕೀಲರು ಒಂದೆ ನಾಣ್ಯದ ಎರಡು ಮುಖಗಳು. ಉಡುಪಿಯಲ್ಲಿ ವಕೀಲರು ಮತ್ತು ನ್ಯಾಯಾಧೀಶರ ನಡುವೆ ಸಮನ್ವಯತೆ ಇದೆ. ಇಲ್ಲಿನ ವಕೀಲರು ಕೇವಲ ಜಿಲ್ಲೆಯಲ್ಲಿ ಕಾನೂನಿನ ಕೆಲಸದ ಜೊತೆಗೂ ಕಲಾತ್ಮಕವಾಗಿ ತೊಡಗಿಸಿಕೊಂಡಿದ್ದಾರೆ. ಸಂಗೀತ, ಯಕ್ಷಗಾನ ಸೇರಿದಂತೆ ಎಲ್ಲ ಕ್ಷೇತ್ರದಲ್ಲೂ ಪರಿಣಿತಿ ಹೊಂದಿದ್ದಾರೆ. ಇಲ್ಲಿ ಕೆಲಸ ಮಾಡಿರುವುದು ಸಂತಸ ನೀಡಿದೆ ಎಂದವರು ನುಡಿದರು.
ವೇದಿಕೆಯಲ್ಲಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ದಿನೇಶ್ ಹೆಗ್ಡೆ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಸಿಜೆಎಮ್ ವಿಘ್ನೇಶ್, ಎರಡನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಸೋಮನಾಥ್, ಹಿರಿಯ ಸಿವಿಲ್ ನ್ಯಾಯಾಧೀಶ ಹಾಗು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಪ್ರಧಾನ ಸಿವಿಲ್ ನ್ಯಾಯಧೀಶೆ ದೀಪಾ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶ್ಯಾಮಪ್ರಕಾಶ್ ಉಪಸ್ಥಿತರಿದ್ದರು.
ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ನ್ಯಾಯವಾದಿ ರಮ್ಯಾ ಕಾಮತ್ ಪ್ರಾರ್ಥಿಸಿದರು. ಕಾರ್ಯದರ್ಶಿ ರಾಜೇಶ್ ವಂದಿಸಿ, ಸಹನಾ ಕುಂದರ್ ನಿರೂಪಿಸಿದರು.
ಉಡುಪಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ನಾಗರಾಜ್, ಹಿರಿಯ ವಕೀಲರಾದ ಆನಂದ್ ಮಡಿವಾಳ, ಎಚ್.ರಾಘವೇಂದ್ರ ಶೆಟ್ಟಿ ವರ್ಗಾವಣೆಗೊಳ್ಳುತ್ತಿರುವ ನ್ಯಾಯಾಧೀಶರ ಬಗ್ಗೆ ಶುಭಶಂಸನೆಗೈದರು.
ವರ್ಗಾವಣೆಗೊಳ್ಳುತ್ತಿರುವ ನ್ಯಾಯಾಧೀಶರುಗಳಿಗೆ ಉಡುಪಿ ವಕೀಲರ ಸಂಘದಿಂದ ಸನ್ಮಾನಿಸಿದರು.
ಜಿಲ್ಲಾಧಿಕಾರಿ ಡಾ| ವಿದ್ಯಾಕುಮಾರಿ ಹಾಗು ಜಿಲ್ಲಾ ಎಸ್ಪಿ ಡಾ| ಅರುಣ್ ಶುಭ ಹಾರೈಸಿದರು.