ಸಾವಿರಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ- ಸಂತ್ರಸ್ತರಿಂದ ಮಾಹಿತಿ ಪಡೆದ ಎಸ್‌ಐಟಿ- ರೇವಣ್ಣಗೆ ಸಮನ್ಸ್?
ಹಾಸನ: ಹೊಳೆನರಸೀಪುರ ಜೆಡಿಎಸ್ ಶಾಸಕ ಎಚ್‌ಡಿ ರೇವಣ್ಣ ಹಾಗೂ ಅವರ ಪುತ್ರ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಕಿರುಕುಳ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಎಸ್ಐಟಿ, ತಂದೆ-ಮಗನಿಂದ ಕಿರುಕುಳಕ್ಕೊಳಗಾದ ಐವರು ಮಹಿಳೆಯರಿಂದ ಮಾಹಿತಿ ಕಲೆಹಾಕಿದೆ. ಈಮಧ್ಯೆ, ಎಸ್‌ಐಟಿ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಲು ಸಿದ್ಧತೆ ನಡೆಸಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸುವ ಸಾಧ್ಯತೆಯಿದೆ.
ರಾಜ್ಯಾದ್ಯಂತ ಸುತ್ತುತ್ತಿರುವ ವಿಡಿಯೋಗಳ ಆಧಾರದ ಮೇಲೆ ಗುರುತಿಸಲ್ಪಟ್ಟ ಐವರು ಮಹಿಳೆಯರನ್ನು ಎಸ್‌ಐಟಿಯ ಹಿರಿಯ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದು, ಸಂತ್ರಸ್ತರು ಆರೋಪಿಗಳ ಸಂಪರ್ಕಕ್ಕೆ ಬಂದಿದ್ದು ಹೇಗೆ ಮತ್ತು ಅವರ ಜೊತೆ ಲೈಂಗಿಕ ಕ್ರಿಯೆ ನಡೆಸುವಂತೆ ಬಲವಂತಪಡಿಸಿದ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸ್ ಅಧಿಕಾರಿಗಳು ಕೂಡ ವಿಡಿಯೋಗಳನ್ನು ಯಾರು ರೆಕಾರ್ಡ್ ಮಾಡಿದ್ದಾರೆ ಮತ್ತು ವಿಡಿಯೋ ಬಳಸಿ ಅವರಲ್ಲಿ ಯಾರನ್ನಾದರೂ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆಯೇ ಎಂಬ ಬಗ್ಗೆ ಸಂತ್ರಸ್ತರನ್ನು ಪ್ರಶ್ನಿಸಿದ್ದಾರೆ. ಸಂತ್ರಸ್ತರನ್ನು ಕೆಲವು ಗಂಟೆಗಳ ಕಾಲ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಯಿತು ಮತ್ತು ಅವರ ಹೇಳಿಕೆಗಳನ್ನು ಮಹಿಳಾ ಸಿಬ್ಬಂದಿ ದಾಖಲಿಸಿಕೊಂಡಿದ್ದಾರೆ.
ಈ ಮಧ್ಯೆ, ಪ್ರಜ್ವಲ್ ರೇವಣ್ಣ ದೇಶದಲ್ಲಿ ಇಲ್ಲದಿದ್ದರೂ, ತನಿಖೆಯ ಭಾಗವಾಗಿ ಆರೋಪಿಗಳಿಗೆ ನೋಟಿಸ್ ನೀಡಲು ಎಸ್‌ಐಟಿ ಸಿದ್ಧತೆ ನಡೆಸುತ್ತಿದೆ. ಶೀಘ್ರದಲ್ಲೇ ವಿಚಾರಣೆಗೆ ಹಾಜರಾಗುವಂತೆ ರೇವಣ್ಣ ಅವರಿಗೆ ನೋಟಿಸ್ ನೀಡುವ ಸಾಧ್ಯತೆ ಇದೆ. ಅಲ್ಲದೆ, ಎಸ್‌ಐಟಿ ತಂಡವು ಹಾಸನದಲ್ಲಿರುವ ರೇವಣ್ಣ ನಿವಾಸ ಸೇರಿದಂತೆ ಇತರೆ ಸ್ಥಳಗಳಿಗೆ ಭೇಟಿ ನೀಡಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವ ಸಾಧ್ಯತೆಯಿದೆ. ತನಿಖಾ ಸಂಸ್ಥೆಯು ಸಂತ್ರಸ್ತರನ್ನು ಒಳಗೊಂಡಂತೆ ವ್ಯಕ್ತಿಗಳ ಸಹ ವಿಚಾರಣೆಗೆ ಕರೆಯಲು ಪಟ್ಟಿಯನ್ನು ಸಿದ್ಧಪಡಿಸುತ್ತಿದೆ.