ಉಡುಪಿ: ವಿವಾಹಿತನೊಂದಿಗೆ ಇನ್ಸ್ಟಾಗ್ರಾಮ್ ಲವ್, ಯುವತಿ ಆತ್ಮಹತ್ಯೆ!
ಉಡುಪಿ: (ಉಡುಪಿ ಟೈಮ್ಸ್ ವರದಿ) ಕುಕ್ಕೆಹಳ್ಳಿ ರಕ್ಷಿತಾ ನಾಯಕ್ ಸಂಶಾಸ್ಪದ ಸಾವಿಗೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಪ್ರಿಯಕರ ಪ್ರಶಾಂತ್ ಕುಂದರ್ ತನ್ನ ಪತ್ನಿಯನ್ನು ತೊರೆದು ತನ್ನ ಜೊತೆ ಸಂಸಾರ ಮಾಡಿಲ್ಲವೆಂದು ನೊಂದು, ಮದ್ಯ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ.
ರಕ್ಷಿತಾಳನ್ನು ಆಸ್ಪತ್ರೆಗೆ ದಾಖಲಿಸಿ ಪರಾರಿಯಾಗಿದ್ದ ಪ್ರಶಾಂತ್, ಸೋಮವಾರ ಉಡುಪಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆತ ಬಾಯಿಬಿಟ್ಟ ಸತ್ಯಾಂಶ ಬಹಿರಂಗವಾಗಿದೆ.
ಕಳೆದ ಶನಿವಾರ ಕುಕ್ಕೆಹಳ್ಳಿಯ ರಕ್ಷಿತಾ ನಾಯಕ್ (19) ತಾನು ವಾಸಿಸುತ್ತಿದ್ದ ಬಾಡಿಗೆ ಮನೆಯಾದ ಅಂಬಾಗಿಲಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೂ ಮುನ್ನ ತನ್ನ ಪ್ರಿಯಾಕರ ಪ್ರಶಾಂತ್ ಕುಂದರ್‌ಗೆ ಫೋನ್ ಮಾಡಿ, ನನ್ನ ಜೊತೆ ಸಂಸಾರ ಮಾಡಬೇಕು, ಇಲ್ಲವಾದರೆ ಇದು ನನ್ನ ಕೊನೆಯ ಕರೆ ಹಾಗೂ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಫೋನ್ ಸಂಭಾಷಣೆ ಕಡಿತ ಮಾಡಿದ್ದಳು.
ಇದರಿಂದ ಹೆದರಿದ ಪ್ರಶಾಂತ್ ತಕ್ಷಣ ಯುವತಿ ವಾಸಿಸುತ್ತಿದ್ದ ಬಾಡಿಗೆ ಮನೆಗೆ ಹೋಗಿದ್ದು, ಆದರೆ ಅಷ್ಟೋತ್ತಿಗಾಗಲೇ ರಕ್ಷಿತಾ ಬೆಡ್ ಶೀಟ್‌ನಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಹೊರಗಿಂದ ನೋಡಿದ ಪ್ರಶಾಂತ್ ಮನೆಯ ಹಿಂಬಾಗಿಲನ್ನು ಒಡೆದು ಒಳ ಪ್ರವೇಶಿಸಿ ಆಕೆಯನ್ನು ನೇಣು ಕುಣಿಕೆಯಿಂದ ಕೆಳಗೆ ಇಳಿಸಿ, ನಂತರ ಆಟೋ ಒಂದರಲ್ಲಿ ಉಡುಪಿ ಗಾಂಧಿ ಆಸ್ಪತ್ರೆಗೆ ದಾಖಲಿಸಿದ್ದ. ಅಷ್ಟೋತ್ತಿಗಾಗಲೇ ರಕ್ಷಿತಾಳ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಮನೆಯವರಿಗೆ ಮಾಹಿತಿ ನೀಡಿದ್ದ ಎಂದು ತನಿಖೆ ವೇಳೆ ತಿಳಿದು ಬಂದಿದೆ. ನಂತರ ಪ್ರಶಾಂತ್ ಹೆದರಿ ಆಸ್ಪತ್ರೆಯಿಂದ ಕಾಲ್ಕಿತ್ತ ಎನ್ನಲಾಗಿದೆ.
ಇಂಟಿರಿಯರ್ ಡಿಸೈನ್ ಕೆಲಸ ಮಾಡುತ್ತಿದ್ದ ಪ್ರಶಾಂತ್ ಗೆ, ರಕ್ಷಿತಾ ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿತ್ತು. ಇಕೆ ಕೂಡ ಆನ್ಲೈನ್ ನಲ್ಲಿ ಇಂಟಿರಿಯರ್ ಡಿಸೈನ್ ವಸ್ತುಗಳನ್ನು ಖರೀದಿಸಿ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಳು.
ಪ್ರಶಾಂತ್ ರಕ್ಷಿತಾ ಜೊತೆ ಅಕ್ರಮ ಸಂಬಂಧ ಹೊಂದಿದ್ದು, ಆಕೆಗಾಗಿ ಬಾಡಿಗೆ ಮನೆಯನ್ನು ಕೂಡ ಮಾಡಿಸಿಕೊಟ್ಟಿದ್ದ. ರಕ್ಷಿತಾ ತಾನು ಮಂಗಳೂರಿನ ಪಿಜಿಯಲ್ಲಿ ಇರುವುದಾಗಿ ತನ್ನ ಹೆತ್ತವರಿಗೆ ಸುಳ್ಳು ಹೇಳಿದ್ದಳು ಎನ್ನಲಾಗಿದೆ. ಪ್ರಶಾಂತ್ ಪತ್ನಿಗೂ ಇವರ ಅಕ್ರಮ ಸಂಬಂಧದ ಬಗ್ಗೆ ತಿಳಿದಿದ್ದು, ಕೆಲ ದಿನಗಳ ಹಿಂದೆ ರಕ್ಷಿತಾಗೆ ಫೋನ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಳು ಎಂದು ತನಿಖೆ ವೇಳೆ ತಿಳಿದು ಬಂದಿದೆ.