ಮಾಜಿ ಕೇಂದ್ರ ಸಚಿವ, ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
ಬೆಂಗಳೂರು, ಎ.29(ಉಡುಪಿ ಟೈಮ್ಸ್ ವರದಿ): ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೇಂದ್ರದ ಮಾಜಿ ಸಚಿವ ಹಾಗೂ ಚಾಮರಾಜ ನಗರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ (75) ಅವರು ಇಂದು ನಿಧನರಾಗಿದ್ದಾರೆ.
ಕುಟುಂಬದ ಸದಸ್ಯರು ಸೇರಿದಂತೆ ಅಪಾರ ಸಂಖ್ಯೆಯ ಬಂಧು- ಮಿತ್ರರನ್ನು ಶ್ರೀಯುತರು ಅಗಲಿದ್ದಾರೆ. ಸೋಮವಾರ ಬೆಳಗಿನ ಜಾವ 1:30ರ ಸುಮಾರಿಗೆ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಹಲವು ದಿನಗಳಿಂದ ಪ್ರಸಾದ್ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ವೈದ್ಯ ಡಾ. ಸುದರ್ಶನ್ ಬಲ್ಲಾಳ್, ಪ್ರಸಾದ್ ಅವರಿಗೆ ಚಿಕಿತ್ಸೆ ನೀಡುತ್ತಿದ್ದರು.
ರಾಜಕೀಯ ಜೀವನ: ಹಳೇ ಮೈಸೂರು ಭಾಗದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನ ಹೊಂದಿದ್ದ ಅವರು,ದಕ್ಷಿಣ ಕರ್ನಾಟಕದ ದಲಿತ ಸೂರ್ಯ ಎಂದೇ ಖ್ಯಾತರಾಗಿದ್ದರು. ಚಾಮರಾಜನಗರ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಕಳೆದ ಮಾರ್ಚ್ 17 ರಂದು ಪ್ರಸಾದ್ ರಾಜಕೀಯ ನಿವೃತ್ತಿ ಘೋಷಿಸಿದ್ದರು. ರಾಜಕೀಯ ಕ್ಷೇತ್ರದಲ್ಲಿ 50 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ವಿ. ಶ್ರೀನಿವಾಸ್ ಪ್ರಸಾದ್ ಅವರು 1974ರಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸುವ ಮೂಲಕ ಅನಿರೀಕ್ಷಿತವಾಗಿ ರಾಜಕೀಯ ಪ್ರವೇಶ ಮಾಡಿದ್ದರು. 1978ರ ಸಾರ್ವತ್ರಿಕ ಚುನಾವಣೆಗೆ ಟಿ.ನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಬಳಿಕ 1980ರಲ್ಲಿ ಚಾಮರಾಜನಗರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗುವ ಮೂಲಕ 33ರ ಹರೆಯದಲ್ಲೇ ಸಂಸತ್ ಪ್ರವೇಶ ಮಾಡಿದ್ದರು.
ಮೃತರ ಪಾರ್ಥಿವ ಶರೀರವನ್ನು ಮೈಸೂರಿನ ಜಯಲಕ್ಷ್ಮೀಪುರ ನಿವಾಸಕ್ಕೆ ರವಾನೆ ಮಾಡಲಾಗಿದೆ. ಅಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎನ್ನುವ ಮಾಹಿತಿ ಕುಟುಂಬ ಮೂಲಗಳು ತಿಳಿಸಿವೆ.