ಕೆಥೊಲಿಕ್ ಸಭಾ ಸಮಾಜದ ಎಲ್ಲಾ ವರ್ಗದ ಜನರಿಗೆ ತಲುಪಿದೆ :ಬಿಷಪ್ ಜೆರಾಲ್ಡ್ ಲೋಬೊ
ಉಡುಪಿ : ಸಂಘಟನೆಯ ಮೂಲಕ ಸಮಾಜದಲ್ಲಿ ಪರಿವರ್ತನೆ ತರುವ ಕೆಲಸ ಕೆಥೊಲಿಕ್ ಸಭಾದ ಮೂಲಕ ನಿರಂತರ ನಡೆಸಿಕೊಂಡು ಬರುತ್ತಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ|ಡಾ| ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.
ಅವರು ಭಾನುವಾರ ಉಡುಪಿ ಶೋಕ ಮಾತಾ ಇಗರ್ಜಿಯ ಸಭಾಂಗಣದಲ್ಲಿ ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕೆಥೊಲಿಕ್ ಸಭಾ ಸಂಘಟನೆ ಕಳೆದ ಎಂಟು ವರ್ಷಗಳಿಂದ ಸಮಾಜದಲ್ಲಿ ಉತ್ತಮ ಸೇವೆಯನ್ನು ನೀಡಿಕೊಂಡು ಬಂದಿದ್ದು, ದೇಶದಲ್ಲಿಯೇ ಮಾದರಿಯಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಸಂಘಟನೆ ನೀಡಿದ ಸೇವೆ ಶ್ಲಾಘನಾರ್ಹವಾಗಿದ್ದು ಈ ಮೂಲಕ ಸಮಾಜದ ಎಲ್ಲಾ ವರ್ಗದ ಜನರಿಗೆ ಸೇವೆ ನೀಡಿದೆ. ಸಮುದಾಯದ ಅಭಿವೃದ್ದಿಯ ನಿಟ್ಟಿನಲ್ಲಿ ಈ ಸೇವೆ ಮುಂದುವರೆಯಲಿ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ರಾಜ್ಯ ಗೋಡಂಬಿ ಉತ್ಪಾದಕರ ಸಂಘದ ಅಧ್ಯಕ್ಷ ಸಂತೋಶ್ ಡಿಸಿಲ್ವಾ ಕಾರ್ಕಳ ಮಾತನಾಡಿ ಕೆಥೊಲಿಕ್ ಸಭಾ ಸಂಘಟನೆ ಇಂದು ದೇಶದಲ್ಲಿಯೇ ಪ್ರಖ್ಯಾತಿ ಪಡೆದಿರುವುದಕ್ಕೆ ಅದು ನೀಡುತ್ತಿರುವ ನಿಸ್ವಾರ್ಥ ಸೇವೆಯಿಂದಾಗಿದೆ. ಸಮಾಜದಲ್ಲಿ ಸಮುದಾಯದ ವ್ಯಕ್ತಿಗಳು ಉನ್ನತ ಹುದ್ದೆಗಳನ್ನು ಪಡೆಯುವತ್ತ ಇನ್ನಷ್ಟು ಪ್ರಯತ್ನ ಮುಂದುವರೆಸುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬರಹಗಾರ ರಿಚ್ಚಾರ್ಡ್ ದಾಂತಿ ಪಾಂಬೂರ್ ಅವರಿಗೆ ಫ್ರಾನ್ಸಿಸ್ ದಾಂತಿ ಸ್ಮಾರಕ ಸಾಹಿತ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು. ದಿ. ಡೆನಿಸ್ ಡಿಸಿಲ್ವಾ ಸ್ಮಾರಕ ಲೇಖನ ಸ್ಮರ್ಧೆಯಲ್ಲಿ ವಿಜೇತರಾದವರಿಗೆ ಬಹಮಾನ ವಿತರಣೆ ಮತ್ತು 2020-21 ನೇ ವರ್ಷದ ಡೈರಕ್ಟರಿಯ ಅನಾವರಣ ಕಾರ್ಯಕ್ರಮ ಜರುಗಿತು.
ಸಭೆಯಲ್ಲಿ ಅತಿ ಹೆಚ್ಚು ಡೊನೇಶನ್ ಕೂಪನ್ ವಿತರಣೆ ಮಾಡಿದವರಿಗೆ, ಸಕ್ರಿಯ ವಲಯ ಮತ್ತು ಘಟಕಗಳಿಗೆ, ಆಮ್ಚೊಂ ಸಂದೇಶ್ ಪತ್ರಿಕೆಗೆ ಸಹಕಾರ ನೀಡಿದವರನ್ನು ಗುರುತಿಸಿ ಗೌರವಿಸಲಾಯಿತು.
ಅಧ್ಯಕ್ಷತೆಯನ್ನು ಸಂಘಟನೆಯ ಅಧ್ಯಕ್ಷ ರೋಬರ್ಟ್ ಮಿನೇಜಸ್ ವಹಿಸಿ ಸಭೆಯನ್ನು ನಡೆಸಿದರು. ಹಿಂದಿನ ಸಾಲಿನ ವಾರ್ಷಿಕ ಮಹಾಸಭೆಯ ವರದಿಯನ್ನು ಸಹಕಾರದರ್ಶಿ ಗ್ರೆಗೋರಿ ಪಿಕೆ ಡಿಸೋಜಾ, ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಸಂತೋಷ್ ಕರ್ನೆಲಿಯೊ, ವಾರ್ಷಿಕ ಲೆಕ್ಕಪತ್ರವನ್ನು ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಮಾನಸ ಸಂಸ್ಥೆಯವರದಿಯನ್ನು ಹೆನ್ರಿ ಮಿನೇಜಸ್, ಸಶಕ್ತ ಸಮುದಾಯ ಟ್ರಸ್ಟ್ ವರದಿಯನ್ನು ಆಲಿಸ್ ರೊಡ್ರಿಗಸ್ ಮಂಡಿಸಿದರು.
ಸಭೆಯಲ್ಲಿ ಕೆಥೊಲಿಕ್ ಸಭಾ ಸಂಘಟನೆಯ ಆಧ್ಯಾತ್ಮಿಕ ನಿರ್ದೇಶಕ ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್, ನಿಕಟಪೂರ್ವ ಅಧ್ಯಕ್ಷ ಆಲ್ವಿನ್ ಕ್ವಾಡ್ರಸ್, ನಿಯೋಜಿತ ಅಧ್ಯಕ್ಷರಾದ ಮೇರಿ ಡಿಸೋಜಾ, ಸಶಕ್ತ ಸಮುದಾಯ ಟ್ರಸ್ಟ್ ಸಂಚಾಲಕರಾದ ವಾಲ್ಟರ್ ಸಿರಿಲ್ ಪಿಂಟೊ, ವಲಯಾಧ್ಯಕ್ಷರುಗಳಾದ ಮೇಬಲ್ ಡಿಸೋಜಾ ಕುಂದಾಪುರ, ರೋಸಿ ಬಾರೆಟ್ಟೊ ಕಲ್ಯಾಣಪುರ, ಸೊಲೋಮನ್ ಆಲ್ವಾರಿಸ್ ಕಾರ್ಕಳ, ಐಡಾ ಕರ್ನೆಲಿಯೋ ಶಿರ್ವಾ, ರೊನಾಲ್ಡ್ ಆಲ್ಮೇಡಾ ಉಡುಪಿ ಉಪಸ್ಥಿತರಿದ್ದರು.
ರೋಬರ್ಟ್ ಮಿನೇಜಸ್ ಸ್ವಾಗತಿಸಿ, ಸಂತೋಷ್ ಕರ್ನೆಲಿಯೊ ವಂದಿಸಿದರು. ಎಡ್ವರ್ಡ್ ಲಾರ್ಸನ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.