ಪ್ರಧಾನಿ ಮೋದಿಯಿಂದ ಸಂವಿಧಾನ ನಾಶ ಮಾಡುವ ಸಂಚು: ಜಯನ್ ಮಲ್ಪೆ
ಉಡುಪಿ, ಎ.28: ಧರ್ಮದ ಹೆಸರಿನಲ್ಲಿ ಸರ್ವಾಧಿಕಾರ ಮಾಡುವ ಮೋದಿ ಅವರು ದಲಿತರನ್ನು ಮತ್ತು ಅಂಬೇಡ್ಕರ್ ಬರೆದ ಸಂವಿಧಾವನ್ನು ನಾಶ ಮಾಡುವ ಸಂಚು ರೂಪಿಸಿದ್ದಾರೆ ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆ ಆರೋಪಿಸಿದ್ದಾರೆ.
ಬ್ರಹ್ಮಾವರ ಸಮೀಪದ ಹಂಗಾರಕಟ್ಟೆಯ ಜೈಭೀಮ್ ಬಳಗ ವತಿಯಿಂದ ರವಿವಾರ ಆಯೋಜಿಸಲಾದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್‌ರ ವರ 133ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಮೋದಿ ಎಷ್ಟು ದೊಡ್ಡ ಹಗರಣ ಮಾಡಿದರೂ ಅವರನ್ನೇ ದೇವರು ಅನ್ನೋ ಜನ ನಮ್ಮ ದಲಿತ ಸಮಾಜದಲ್ಲೂ ಇದ್ದಾರೆ. ಮೋದಿ ಭ್ರಷ್ಟಾಚಾರ ಮಾಡಿ, ಬಡಜನರ ದುಡ್ಡನ್ನು ನುಂಗಿ ನೀರು ಕುಡಿಯುತ್ತ, ಬಡವರ ರಕ್ತ ಹೀರಿ ಅದನ್ನು ಉದ್ಯಮಿಗಳಿಗೆ ಅಭಿಷೇಕ ಮಾಡುತ್ತಿದ್ದಾರೆ. ದಲಿತ ವಿದ್ಯಾವಂತರು ಕೂಡ ಮೋದಿಯ ಕಪಟ ನಾಟಕವನ್ನು ಅರ್ಥಮಾಡಿಕೊಳ್ಳದೆ ಅಂಧ ಭಕ್ತರಂತೆ ವರ್ತಿಸುವುದು ಅಂಬೇಡ್ಕರ್‌ಗೆ ಬಗೆದ ದ್ರೋಹ ಎಂದು ಅವರು ದೂರಿದರು.
ಮುಖ್ಯ ಅತಿಥಿಯಾಗಿ ದಲಿತ ಮುಖಂಡ ಶೇಖರ್ ಹಾವಂಜೆ ಮಾತನಾಡಿ, ಅಂಬೇಡ್ಕರ್‌ರನ್ನು ಸ್ವಾರ್ಥಕ್ಕೆ ಬಳಸುವವರು ದೇಶದ್ರೋಹಕ್ಕೆ ಸಮ. ನಿಜವಾದ ದಲಿತ ನಾಯಕರು ಅವರ ತತ್ವ ಸಿದ್ಧಾಂತವನ್ನು ಮೈಗೂಡಿಸಿಕೊಳ್ಳಬೇಕು. ಮೌಢ್ಯಕ್ಕೆ ಬಲಿಯಾಗದೆ ಧಮ್ಮ ಮಾರ್ಗದಲ್ಲಿ ನಡೆದರೆ ಮಾತ್ರ ದಲಿತರು ಅಭಿವೃದ್ಧಿಹೊಂದಲು ಸಾಧ್ಯ ಎಂದು ಅಭಿಪ್ರಾಯ ಪಟ್ಟರು.
ಉಡುಪಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸೌರಭ ಬಳ್ಳಾಲ್ ಮಾತನಾಡಿ, ಅಂಬೇಡ್ಕರ್ ಬರೆದ ಸಂವಿಧಾನದ ಆಶಯವನ್ನು ಉಳಿಸುವುದು ಇಂದು ಪ್ರತಿಯೊಬ್ಬರ ಕರ್ತವ್ಯ. ದಲಿತರು ತಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುವಂತೆ ಕೆಲಸ ಮಾಡಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್, ಗ್ರಾ.ಪಂ. ಸದಸ್ಯೆ ಸುಲೋಚನಾ ಸುಧಾಕರ್, ಜೈಭೀಮ್ ಬಳಗದ ಅಧ್ಯಕ್ಷ ಅಣ್ಣಪ್ಪ ಗೆದ್ದೆಮನೆ, ಗಣೇಶ್ ಹಂಗಾಕಟ್ಟೆ ಉಪಸ್ಥಿತರಿದ್ದರು. ಸಂತೋಷ್ ಸ್ವಾಗತಿಸಿದರು. ರಂಗ ಹಂಗಾರಕಟ್ಟೆ ವಂದಿಸಿದರು. ಸದಾನಂದ ಕಾರ್ಯಕ್ರಮ ನಿರೂಪಿಸಿದರು.