ಕುಂದಾಪುರ: ಭೀಕರ ರಸ್ತೆ ಅಪಘಾತ, ಯುವತಿ ಸ್ಥಳದಲ್ಲೇ ಮೃತ್ಯು- ನಾಲ್ವರು ಗಂಭೀರ
ತೆಕ್ಕಟ್ಟೆ: ಇಲ್ಲಿನ ಗುಡ್ಡೆಅಂಗಡಿಯ ಕೊಕಾಡಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಢಿಕ್ಕಿಯಾಗಿ ಹೊಂಡಕ್ಕೆ ಬಿದ್ದ ಪರಿಣಾಮ ಓರ್ವ ಯುವತಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ಮಧ್ಯಾಹ್ನ ಸಂಭವಿಸಿದೆ.
ಬೆಂಗಳೂರಿನ ಕಂಪೆನಿಯ ಉದ್ಯೋಗಿ ಕೀರ್ತಿ (25) ಸ್ಥಳದಲ್ಲಿಯೇ ಮೃತಪಟ್ಟವರು ಎಂದು ಗುರುತಿಸಲಾಗಿದೆ.
ಕಾರಿನಲ್ಲಿ ಬೆಂಗಳೂರು ಮೂಲದ ಸ್ನೇಹಿತರಾದ ವಿಘ್ನೇಶ್ (28), ಚೇತನ್ (28), ಐಶ್ವರ್ಯಾ (27), ಲತಾ (26) ಎಂಬವರು ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಕಾರಿನ ಒಂದು ಪಾರ್ಶ್ವ ಸಂಪೂರ್ಣ ಜಖಂಗೊಂಡಿತ್ತು. ಕಾರಿನ ಒಳಗೆ ಸಿಲುಕಿಕೊಂಡಿದ್ದ ಗಾಯಾಳುಗಳನ್ನು ಹೊರತೆಗೆಯಲು ಸ್ಥಳೀಯರು ಹರಸಾಹಸಪಟ್ಟರು.
ಗಾಯಾಳುಗಳು ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಸುದ್ದಿ ತಿಳಿಯತ್ತಿದ್ದಂತೆ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ್ ಹಾಗೂ ಕೋಟ ಪೊಲೀಸ್ ಠಾಣಾಧಿಕಾರಿ ತೇಜಸ್ವಿ, ಸಿಬಂದಿ ಪ್ರಸನ್ನ, ಕೃಷ್ಣ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾನವೀಯತೆ ಮೆರೆದ ಸ್ಥಳೀಯರು
ಅಪಘಾತವಾದ ಸಂದರ್ಭ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ಶೆಟ್ಟಿ ಚಿಟ್ಟೆಬೈಲು, ಮೊಳಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಉದಯ ಕುಲಾಲ್, ಚಂದ್ರ, ಸುರೇಶ್ ಅವರು 5 ಮಂದಿಯನ್ನು ಆ್ಯಂಬುಲೆನ್ಸ್ ಹಾಗೂ ಎರಡು ಕಾರುಗಳ ಮೂಲಕ ಕೋಟೇಶ್ವರದ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ವೀಕೆಂಡ್ ಪ್ರವಾಸಕ್ಕೆ ಬಂದಿದ್ದರು
ಕಾರು ಚಾಲಕ ಮಿಥುನ್ (28) ಅವರ ಅತೀ ವೇಗ ಹಾಗೂ ಅಜಾಗರೂಕತೆಯೇ ಈ ಅಪಘಾತಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ. ಸ್ನೇಹಿತರು ಖಾಸಗಿ ಕಂಪೆನಿಯ ಉದ್ಯೋಗಿಗಳಾಗಿದ್ದು, ಎಲ್ಲರೂ ಒಂದಾಗಿ ಮುರ್ಡೇಶ್ವರ, ಗೋಕರ್ಣದ ಕಡೆಗೆ ವೀಕೆಂಡ್ ರಜೆಯಲ್ಲಿ ಪ್ರವಾಸಕ್ಕೆ ತೆರಳುತ್ತಿದ್ದವರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.