ರಾಜಕಾರಣಕ್ಕಾಗಿ ಸಿಎಂ ಹಿಂದುಳಿದ ವರ್ಗಗಳ ಆಯೋಗದ ವರದಿ ಇಟ್ಟುಕೊಂಡಿದ್ದಾರೆ: ಬೊಮ್ಮಾಯಿ
ಮೇ 7 ಕ್ಕೆ ಬಿಜೆಪಿಗೆ ಮತ, ಕಾಂಗ್ರೆಸ್ ಗೆ ಚೆಂಬು: ಬಸವರಾಜ ಬೊಮ್ಮಾಯಿ
ಹಾವೇರಿ: ಚುನಾವಣಾ ರಾಜಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆದು ಇಟ್ಟುಕೊಂಡಿದ್ದಾರೆ. ರಾಜ್ಯ ಸರ್ಕಾರ ಬಳಿ ಇರುವ ವರದಿಯನ್ನೇ ಬಿಡುಗಡೆ ಮಾಡಿಸಲಾಗದ ರಾಹುಲ್ ಗಾಂಧಿ, ದೇಶಾದ್ಯಂತ ಹಿಂದುಳಿದ ವರ್ಗಗಳ ಸಮೀಕ್ಷೆ ಮಾಡುವುದಾಗಿ ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಅವರು ಹಾನಗಲ್ ವಿಧಾನಸಭಾ ಕ್ಷೇತ್ರದ ಮಾರನಬೀಡ್, ಕಂಚಿನೆಗಳೂರು, ಮಲಗುಂದ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು. ಈ ರಾಜ್ಯ ಸರ್ಕಾರದವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಸಮಾಜಗಳ ನಡುವೆ ಸಂಘರ್ಷ ಹುಟ್ಟಿಸುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದ ಆಯೋಗದ ವರದಿ ಪಡೆದು ಇಟ್ಡುಕೊಂಡಿದ್ದಾರೆ.ರಾಹುಲ್ ಗಾಂಧಿಯವರು ದೇಶಾದ್ಯಂತ ಹಿಂದುಳಿದ ವರ್ಗಗಳ ಸಮೀಕ್ಷೆ ಮಾಡುವುದಾಗಿ ಹೇಳುತ್ತಾರೆ. ಆದರೆ, ರಾಜ್ಯದಲ್ಲಿ ವರದಿ ಪಡೆದಿದ್ದರೂ ಅದನ್ನು ಬಿಡುಗಡೆ ಮಾಡುತ್ತಿಲ್ಲ. ವರದಿ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದರು.
ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಿತ್ರಾರ್ಜಿತ ಆಸ್ತಿ ಮಕ್ಕಳಿಗೆ ಬರಬೇಕಾದರೆ ಶೇ 55% ರಷ್ಟು ಸರ್ಕಾರಕ್ಕೆ ತೆರಿಗೆ ಕಟ್ಟಬೇಕು ಎನ್ಮುತ್ತಾರೆ. ಮೊದಲು ತೆರಿಗೆ ಕಟ್ಡುವ ವ್ಯವಸ್ಥೆ ಇತ್ತು. ಆಗಿನ ಪ್ರಧಾನಿ ರಾಜಿವ್ ಗಾಂಧಿ ಅವರು ತಮ್ಮ ತಾಯಿಯ ಆಸ್ತಿ ಪಡೆಯಲು ಸರ್ಕಾರಕ್ಕೆ ತೆರಿಗೆ ಕಟ್ಟಬೇಕು ಅನ್ನುವ ಕಾರಣಕ್ಕೆ ಆ ಕಾಯ್ದೆಯನ್ನು ರದ್ದು ಮಾಡಿದರು. ಈಗ ರಾಹುಲ್ ಗಾಂಧಿ ಅದನ್ನು ಜಾರಿ ಮಾಡುವುದಾಗಿ ಹೇಳಿದ್ದಾರೆ. ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇವಲ ಸಮೀಕ್ದೆ ಮಾಡುತ್ತೇವೆ ಅಂತ ಹೇಳುತ್ತಿದ್ದಾರೆ. ಅವರ ನಿಲುವು ಏನು ಎಂದು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ನೆಹರು ಕುಟುಂಬದ ಆಸ್ತಿ ಮಾತ್ರ ಹೆಚ್ಚಳ
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಗತ್ ಸಿಂಗ್ ಸೇರಿದಂತೆ ಅನೇಕ ವೀರರು ಪ್ರಾಣ ಕಳೆದು ಕೊಂಡಿದ್ದಾರೆ. ಅವರಿಗೆ ಸ್ವಾತಂತ್ರ್ಯದ ಲಾಭ ದೊರೆಯಲಿಲ್ಲ. ಕೇವಲ ನೆಹರೂ ಗಾಂಧಿ ಕುಟುಂಬಕ್ಕೆ ಮಾತ್ರ ಲಾಭ ಸಿಕ್ಕಿದೆ. ಬಡತನ ನಿರ್ಮೂಲನೆ ಮಾಡುತ್ತೇವೆ ಅಂತ ಇಂದಿರಾ ಗಾಂಧಿ ಹೇಳಿದರು. ಆದರೆ, ಅವರ ಕುಟುಂಬದ ಆಸ್ತಿ ಮಾತ್ರ ಹೆಚ್ಚಳ ಮಾಡಿಕೊಂಡರು. ಅಂಬಾನಿ, ಅದಾನಿಯವರ ಆಸ್ತಿ ಹೆಚ್ಚಳವಾಗುವಂತೆ ಮಾಡಿದವರು ಕಾಂಗ್ರೆಸ್ ನವರು. ಪಿತ್ರಾರ್ಜಿತ ಆಸ್ತಿಯನ್ನು ಹಂಚಿಕೆ ಮಾಡುವುದಾಗಿ ಹೇಳಿದ್ದಾರೆ. ನಿಮ್ಮ ಆಸ್ತಿ ಉಳಿಯಬೇಕೆಂದರೆ ಬಿಜೆಪಿಗೆ ಹಾಕಿ, ಸರ್ಕಾರಕ್ಕೆ ಹೋಗಬೇಕೆಂದರೆ ಕಾಂಗ್ರೆಸ್ ಗೆ ಮತ ಹಾಕಿ ಎಂದು ಹೇಳಿದರು.
ಮಹಿಳೆ ಸುರಕ್ಷಿತವಾಗಿಲ್ಲ
ಈ ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ. ಅಲ್ಪ ಸಂಖ್ಯಾತ ಮಹಿಳೆಯರು, ದಲಿತ ಮಹಿಳೆಯರು ಸುರಕ್ಷಿತವಾಗಿ ಉಳಿದಿಲ್ಲ. ಹುಬ್ಬಳ್ಳಿ ಕಾಲೇಜು ಯುವತಿ ನೇಹಾ ಕೊಲೆ ವಯಕ್ತಿಕ ವಿಚಾರ ಎಂದು ಸಿಎಂ ಹೇಳುತ್ತಿದ್ದಾರೆ. ನಮ್ಮ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಆದರೂ ಕಾಂಗ್ರೆಸ್ ನವರಿಗೆ ಅಲ್ಪ ಸಂಖ್ಯಾತರ ಮತ ಬೇಕು. ಅದಕ್ಕಾಗಿ ಅವರಿಗೆ ರಕ್ಷಣೆ ಕೊಡುತ್ತಿದ್ದಾರೆ. ಅತ್ಯಾಚಾರಿಗಳು, ಕೊಲೆಗಡುಕರಿಗೆ ಈ ಸರ್ಕಾರದಲ್ಲಿ ರಾಜ ಮರ್ಯಾದೆ ದೊರೆಯುತ್ತಿದೆ ಎಂದರು. ಈ ಸರ್ಕಾರದಲ್ಲಿ ನಮ್ಮ ಹೆಣ್ಣು ಮಕ್ಕಳ ಮಾನ ಪ್ರಾಣದ ರಕ್ಷಣೆಯ ಗ್ಯಾರೆಂಟಿ ಬೇಕಿದೆ. ಕರ್ನಾಟಕ ಸುರಕ್ಷಿತವಾಗಿರಬೇಕಾದರೆ ಕಾಂಗ್ರೆಸ್ ಅನ್ನು ಕಿತ್ತು ಹಾಕಬೇಕು. ನರೇಂದ್ರ ಮೋದಿಯವರು ಹೆಣ್ಣುಮಕ್ಕಳಿಗೆ ಶಾಸ್ವತ ಯೋಜನೆ ಜಾರಿಗೊಳಿಸಿ ದ್ದಾರೆ. ಪ್ರಧಾನಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಹೆಣ್ಣುಮಕ್ಕಳ ಹೆಸರಿನಲ್ಲಿ ಮನೆ ನಿರ್ಮಾಣ, ಉಜ್ವಲ ಯೋಜನೆ ಅಡುಗೆ ಸಿಲೆಂಡರ್, ಶೌಚಾಲು ನಿರ್ಮಾಣ ಮಾಡಿದ್ದಾರೆ. ಕಾಂಗ್ರೆಸ್, ತೆಲಂಗಾಣ, ಕರ್ನಾಟಕ ಬಿಟ್ಡರೆ ಎಲ್ಲ ರಾಜ್ಯಗಳಲ್ಲಿ ಠೇವಣಿ ಕಳೆದುಕೊಳ್ಳಲಿದೆ ಎಂದರು.
ಮೇ 7 ಕ್ಕೆ ಚೆಂಬು
ನಾವು ಹಾನಗಲ್ ತಾಲೂಕಿನಲ್ಲಿ ತಿಳವಳ್ಳಿ, ಮಾರನಗುಡಿ ಏತ ನಿರಾವರಿ ಯೋಜನೆ ಜಾರಿ ಮಾಡಿದ್ದೇವೆ. ಮಾಳಗಿ ಡ್ಯಾಮ್ 16 ಅಡಿ ಇದ್ದಾಗ ನೀರು ಬಿಟ್ಟಿದ್ದೇವು. ಇವರು 20 ಅಡಿ ಇದ್ದರೂ ನೀರು ಬಿಡುತ್ತಿಲ್ಲ. ಇವರಿಗೆ ರೈತರ ಬಗ್ಗೆ ಕಾಳಜಿಯಿಲ್ಲ.
ಈ ಸರ್ಕಾರ ರೈತರು, ಮಹಿಳೆಯರು, ದಲಿತರಿಗೆ ಚೆಂಬು ಕೊಟ್ಟಿದ್ದೆ, ಮೇ 7 ರಂದು ಬಿಜೆಪಿಗೆ ಮತ ಹಾಕುವ ಮೂಲಕ ಕಾಂಗ್ರೆಸ್ ಗೆ ಚೆಂಬು ಕೊಡಬೇಕು ಎಂದರು.
ಪ್ರಚಾರ ಸಂದರ್ಭದಲ್ಲಿ ಸಂಸದ ಶಿವಕುಮಾರ ಉದಾಸಿ, ಮಾಜಿ ಸಚಿವ ಮನೋಹರ ತಹಸೀಲ್ದಾರ, ಮಾಜಿ ಶಾಸಕ ಶಿವರಾಜ ಸಜ್ಜನ ಹಾಜರಿದ್ದರು.
ಶಿವಕುಮಾರ ಉದಾಸಿ ರಾಜಕಾರಣಿಗಳಿಗೆ ಮಾದರಿ
ಹಾವೇರಿ ಸಂಸದ ಶಿವಕುಮಾರ ಉದಾಸಿಯವರು ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇದ್ದರೂ ಬೇರೆಯವರಿಗೆ ಕ್ಷೇತ್ರ ಬಿಟ್ಟುಕೊಡುವ ಮೂಲಕ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.
ಹಾವೇರಿ ಜನರು ಇಷ್ಟೊಂದು ಬಿಸಿಲು ಲೆಕ್ಕಿಸದೇ ಚುನಾವಣೆಯಲ್ಲಿ ಪಾಲ್ಗೊಳ್ಳುತ್ತಿರುವುದು ಕೇಂದ್ರದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಉದ್ದೇಶ ಇದೆ ಎಂದರು. ಶಿವಕುಮಾರ್ ಉದಾಸಿಯವರು ಈ ಭಾಗದಲ್ಲಿ ಸಾಕಷ್ಡು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರು ವಯಕ್ತಿಕ ಕಾರಣದಿಂದ ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಅವರು ಮೂರು ಬಾರಿ ಆಯ್ಕೆಯಾಗಿದ್ದರು. ಈ ಬಾರಿಯೂ ಗೆಲ್ಲುತ್ತಿದ್ದರು. ಅವರು ಹಿಂದೆ ಸರಿದು ರಾಜಕಾರಣಿಗಳಿಗೆ ಮಾದರಿಯಾದರು. ಹಾನಗಲ್ ಕ್ಷೇತ್ರದಲ್ಲಿ ಸಿ.ಎಂ ಉದಾಸಿ ಹಾಗೂ ಮನೋಹರ್ ತಹಸೀಲ್ದಾರ್ ಅಭಿವೃದ್ಧಿ ರಾಜಕಾರಣ ಮಾಡಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ 2013 ರಲ್ಲಿ ಅದೇ ತಮ್ಮ ಕೊನೆಯ ಚುನಾವಣೆ ಅಂತ ಹೇಳಿದ್ದರು. ಆ ಮೇಲೆ ಅಧಿಕಾರದ ಆಸೆಯಿಂದ ಮತ್ತೆ ಬಿಜೆಪಿ ಸೋಲಿಸಲು ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದರು. ಆ ಚುನಾವಣೆಯಲ್ಲಿ ತಾವೇ ಸೋತರು ಎಂದು ಬಸವರಾಜ ಬೊಮ್ಮಾಯಿಯವರು ಹೇಳಿದರು.