ಹೊಸ ದಾಖಲೆ ಬರೆದ ಕೆಎಂಎಫ್: ಒಂದೇ ದಿನ 51ಲಕ್ಷ ಲೀ. ಹಾಲು ಮಾರಾಟ!
ಬೆಂಗಳೂರು: ತಾಪಮಾನ ಹೆಚ್ಚಳದಿಂದ ಬಸವಳಿದ ಜನ ಹಾಲು, ಮೊಸರು, ಐಸ್ ಕ್ರೀಮ್ ಬಳಕೆಯನ್ನು ಹೆಚ್ಚಳ ಮಾಡಿದ್ದು, ಇದರ ಪರಿಣಾಮ ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಹಾಲು, ಮೊಸರು ಮಾರಾಟದಲ್ಲಿ ಹೊಸ ದಾಖಲೆ ಬರೆದಿದೆ.
ಕೆಎಂಎಫ್ ಒಂದೇ ದಿನ 51 ಲಕ್ಷ ಲೀಟರ್ ನಂದಿನಿ ಹಾಲು ಮತ್ತು 16.5 ಲಕ್ಷ ಲೀಟರ್ ಮೊಸರನ್ನು ಮಾರಾಟ ಮಾಡುವ ಮೂಲಕ ತನ್ನದೇ ದಾಖಲೆಯನ್ನು ಮುರಿದಿದೆ. ಇದರ ಜೊತೆಗೆ ಐಸ್ ಕ್ರೀಮ್ ಮಾರಾಟದಲ್ಲಿ ಕೂಡ ಭಾರೀ ಏರಿಕೆಯಾಗಿರುವುದು ಕಂಡು ಬಂದಿದೆ.
ಏಪ್ರಿಲ್ ಸಮಯದಲ್ಲಿ ಏಪ್ರಿಲ್ 9 ಮತ್ತು 15 ರ ನಡುವೆ – ಯುಗಾದಿ, ರಾಮ ನವಮಿ ಮತ್ತು ಈದ್-ಉಲ್-ಫಿತರ್ನಂತಹ ಹಬ್ಬಗಳು ಒಂದರ ನಂತರ ಒಂದರಂತೆ ಬಂದಿದ್ದು, ಹಾಲು ಮೊಸರಿನ ಮಾರಾಟ ಹೆಚ್ಚಳಕ್ಕೆ ಇದೂ ಒಂದು ಕಾರಣವಾಗಿದೆ ಎಂದು ಕೆಎಂಎಫ್ನ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್ ಹೇಳಿದ್ದಾರೆ.
ಈ ಬಾರಿ ಮೊಸರು ತಯಾರಿಕೆಯಲ್ಲಿ ಸುಧಾರಣೆಗಳನ್ನು ಮಾಡಿದ್ದೇವೆ. ಇದರಿಂದ ಮೊಸರು ಮಾರಾಟದಲ್ಲಿ ಭಾರಿ ಹೆಚ್ಚಳವಾಗುತ್ತಿರುವುದು ಕಂಡು ಬಂದಿದೆ. ದಿನಕ್ಕೆ ಎರಡು ಬಾರಿ ಉತ್ಪನ್ನಗಳನ್ನು ಪೂರೈಸುತ್ತಿದ್ದೇವೆ. ಕೆಲವು ಪ್ರದೇಶಗಳಲ್ಲಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಮೂರು ಬಾರಿ ಉತ್ಪನ್ನಗಳನ್ನು ಪೂರೈಸಲಾಗುತ್ತಿದೆ ಎಂದು ತಿಳಿಸಿದ್ದಾರೆ.